ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ನೀಡುತ್ತಿರುವ ಅತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿ಼ಲೆಂಡ್ ವಿರುದ್ಧದ 3ನೇ ಟೆಸ್ಟ್ನಲ್ಲಿ ಪ್ರಾಬಲ್ಯ ಸಾಧಿಸಿದೆ. ಎರಡು ದಿನದ ಆಟ ಬಾಕಿಯಿರುವ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಪಡೆ, ಗೆಲುವಿನ ಫೇವರೆಟ್ ಎನಿಸಿದೆ.
ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್, ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿತು. ಜಾನಿ ಬೈರ್ಸ್ಟೋವ್(162) ಹಾಗೂ ಜೇಮೀ ಓವರ್ಟನ್(97) ಭರ್ಜರಿ ಆಟದಿಂದ ಮೊದಲ ಇನ್ನಿಂಗ್ಸ್ನಲ್ಲಿ 360 ರನ್ಗಳಿಸಿತು. ಆ ಮೂಲಕ 31 ರನ್ಗಳ ಅಲ್ಪ ಮುನ್ನಡೆ ಪಡೆಯಿತು. ಇದಕ್ಕುತ್ತರವಾಗಿ 2ನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿ಼ಲೆಂಡ್ 5 ವಿಕೆಟ್ ನಷ್ಟಕ್ಕೆ 168 ರನ್ಗಳಿಸಿದ್ದು, 137 ರನ್ ಮುನ್ನಡೆಯೊಂದಿಗೆ ದಿನದಾಟ ಮುಕ್ತಾಯಗೊಳಿಸಿದೆ. ಮೊದಲ ಇನ್ನಿಂಗ್ಸ್ ಹೀರೋ ಡೆರಿಲ್ ಮಿಚೆಲ್(4*) ಹಾಗೂ ಟಾಮ್ ಬ್ಲಂಡಲ್(5*) ಕಣದಲ್ಲಿದ್ದಾರೆ.
ಆಂಗ್ಲರಿಗೆ ಇನ್ನಿಂಗ್ಸ್ ಮುನ್ನಡೆ:
ಎರಡನೇ ದಿನದ ಮೊತ್ತ 264/6 ರನ್ಗಳೊಂದಿಗೆ ದಿನದಾಟ ಆರಂಭಿಸಿದ ಇಂಗ್ಲೆಂಡ್ಗೆ ಜಾನಿ ಬೈರ್ಸ್ಟೋವ್ ಹಾಗೂ ಜೇಮೀ ಓವರ್ಟನ್ ಉತ್ತಮ ಆರಂಭ ನೀಡಿದರು. ಭರ್ಜರಿ ಬ್ಯಾಟಿಂಗ್ನಿಂದ ಚೊಚ್ಚಲ ಟೆಸ್ಟ್ ಶತಕದ ನಿರೀಕ್ಷೆಯಲ್ಲಿದ್ದ ಓವರ್ಟನ್(97) ರನ್ಗಳಿಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾಗಿ ನಿರಾಸೆಯಿಂದ ಪೆವಿಲಿಯನ್ ಸೇರಿದರು. ನಂತರ ಬಂದ ಸ್ಟುವರ್ಟ್ ಬ್ರಾಡ್(42) ಬಿರುಸಿನ ಆಟವಾಡಿದರು. ಮತ್ತೊಂದೆಡೆ 2ನೇ ದಿನದಂದೇ ಶತಕ ಸಿಡಿಸಿ ಮಿಂಚಿದ್ದ ಜಾನಿ ಬೈರ್ಸ್ಟೋವ್(162) ರನ್ಗಳಿಸಿ ಔಟಾದರು. ಅಂತಿಮವಾಗಿ ಇಂಗ್ಲೆಂಡ್ 360 ರನ್ಗಳಿಗೆ ಆಲೌಟ್ ಆಗುವ ಮೂಲಕ 31 ರನ್ಗಳ ಮುನ್ನಡೆ ಸಾಧಿಸಿತು. ಕಿವೀಸ್ ಪರ ಬೋಲ್ಟ್ 4, ಸೌಥಿ 3 ಹಾಗೂ ವ್ಯಾಗ್ನರ್ 2 ವಿಕೆಟ್ ಪಡೆದು ಮಿಂಚಿದರು.
ಲಾಥಂ-ವಿಲಿಯಂಸನ್ ಆಸರೆ:
ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮುನ್ನಡೆ ಮೊತ್ತ 31 ರನ್ಗಳಿಗೆ ಪ್ರತಿಯಾನಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ವಿಲ್ ಯಂಗ್(8) ರನ್ಗಳಿಸಿ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಜೊತೆಯಾದ ಟಾಮ್ ಲಾಥಂ(76) ಹಾಗೂ ನಾಯಕ ಕೇನ್ ವಿಲಿಯಂಸನ್(48) 2ನೇ ವಿಕೆಟ್ಗೆ 97 ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ನಂತರ ಕಣಕ್ಕಿಳಿದ ಡೆವೊನ್ ಕಾನ್ವೆ(11), ಹೆನ್ರಿ ನಿಕೋಲಸ್(7) ಬ್ಯಾಟಿಂಗ್ ವೈಫಲ್ಯ ಕಂಡರು. ಸದ್ಯ 3ನೇ ದಿನದಂತ್ಯಕ್ಕೆ ನ್ಯೂಜಿ಼ಲೆಂಡ್ 5 ವಿಕೆಟ್ಗೆ 168 ರನ್ಗಳಿಸಿದ್ದು, ಮೊದಲ ಇನ್ನಿಂಗ್ಸ್ ಹೀರೋಗಳಾದ ಡೆರಿಲ್ ಮಿಚೆಲ್ ಹಾಗೂ ಟಾಮ್ ಬ್ಲಂಡಲ್ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.