ಎರಡು ತಂಡಗಳಿಗೂ ಪ್ಲೇ-ಆಫ್ ಅವಕಾಶಗಳಿವೆ. ಆದರೆ ಗೆಲುವೊಂದೇ ದಾರಿಯಾಗಿದೆ. ಆರ್ಸಿಬಿ 12ನೇ ಪಂದ್ಯ ಆಡುತ್ತಿದ್ದರೆ, ಸನ್ ರೈಸರ್ಸ್ ಪಾಲಿಗೆ ಇದು 11ನೇ ಪಂದ್ಯ. ಸದ್ಯ ಬೆಂಗಳೂರು ತಂಡ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ 18 ಅಂಕಗಳೊಂದಿಗೆ ಪ್ಲೆ-ಅಫ್ ಸ್ಥಾನ ಗಟ್ಟಿಯಾಗುತ್ತದೆ. ಮತ್ತೊಂದು ಕಡೆ ಹೈದ್ರಾಬಾದ್ 10 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಾರಿದೆ. ಉಳಿದ 4 ಪಂದ್ಯಗಳಲ್ಲಿ ಕನಿಷ್ಠ ಮೂರು ಗೆದ್ದರೂ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಖಚಿತ. ಹೀಗಾಗಿ ವಾಂಖೆಡೆ ಮೈದಾನದಲ್ಲಿ ನಡೆಯುವ ಈ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 3 ಸೋಲುಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಪಡೆದಿದೆ. ಸನ್ರೈಸರ್ಸ್ ಹೈದ್ರಾಬಾದ್ ಹ್ಯಾಟ್ರಿಕ್ ಸೋಲಿನ ಬಳಿಕ ಈ ಪಂದ್ಯವನ್ನು ಆಡಲು ಕಣಕ್ಕಿಳಿಯುತ್ತಿದೆ. ಈ ಬಾರಿಯ ಮೊದಲ ಮುಖಾಮುಖಿಯಲ್ಲಿ ಸನ್ ರೈಸರ್ಸ್ ಆರ್ಸಿಬಿ ತಂಡವನ್ನು 65 ರನ್ಗಳಿಗೆ ಆಲೌಟ್ ಮಾಡಿ ಭರ್ಜರಿ ಜಯ ಸಾಧಿಸಿತ್ತು. ಈಗ ಆರ್ಸಿಬಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ.
ಆರ್ಸಿಬಿಗೆ ಬ್ಯಾಟಿಂಗ್ ತಲೆನೋವು ಪಂದ್ಯದಿಂದ ಪಂದ್ಯಕ್ಕೆ ಹೆಚ್ಚುತ್ತಿದೆ. ವಿರಾಟ್ ಕೊಹ್ಲಿ ರನ್ಗಳಿಸುವ ದಾರಿಯಲ್ಲಿದ್ದರೂ ಅದರಲ್ಲಿ ವೇಗ ಇಲ್ಲ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ ಹೆಚ್ಚಿನ ಕೊಡುಗೆ ನೀಡಿಲ್ಲ. ಮಹಿಪಾಲ್ ಲೊಮ್ರೊರ್ ಮತ್ತ ರಜತ್ ಪಾಟೀದಾರ್ ಭರವಸೆ ಹುಟ್ಟಿಸಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಇತ್ತೀಚೆಗೆ ವೈಫಲ್ಯ ಕಂಡರೂ ಭರವಸೆ ಕಳೆದುಕೊಂಡಿಲ್ಲ.
ಬೌಲಿಂಗ್ ಆರ್ಸಿಬಿಗೆ ಬಲ ತಂದಿದೆ. ಜೋಶ್ ಹ್ಯಾಜಲ್ ವುಡ್ ಕರಾರುವಕ್ ದಾಳಿ ಮಾಡುತ್ತಿದ್ದಾರೆ. ಆದರೆ ಸಿರಾಜ್ ದುಬಾರಿ ಆಗಿದ್ದು ನಿರಾಸೆಗೆ ಕಾರಣವಾಗಿದೆ. ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ವಿಕೆಟ್ ಬೇಟೆ ಆರಂಭಿಸಿದ್ದಾರೆ. ಮ್ಯಾಕ್ಸ್ವೆಲ್ ಮತ್ತು ಶಹಬಾಸ್ 5ನೇ ಬೌಲರ್ ಪಾತ್ರ ನಿಭಾಯಿಸುತ್ತಿದ್ದಾರೆ.
ಸನ್ ರೈಸರ್ಸ್ ತಂಡಕ್ಕೂ ಬ್ಯಾಟಿಂಗ್ ತಲೆನೋವಾಗಿದೆ. ಕೇನ್ ವಿಲಿಯಮ್ಸ್ನ ನಿಧಾನಗತಿಯ ಆಟ ಮತ್ತು ರನ್ ಬರ ತಲೆನೋವಾಗಿದೆ. ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಡೇಂಜರಸ್. ಏಡಿಯನ್ ಮಾರ್ಕ್ ರಾಂ ಮತ್ತು ನಿಕೋಲಸ್ ಪೂರನ್ ಬಗ್ಗೆ ವಿಶೇಷ ತಂತ್ರಗಳು ಬೇಕಿದೆ. ಶಶಾಂಕ್ ಸಿಂಗ್ ಕ್ರೀಸ್ನಲ್ಲಿ ನಿಂತ್ರಿ ಅಪಾಯಕಾರಿ.
ಸನ್ ರೈಸರ್ಸ್ ಬೌಲಿಂಗ್ ವಿಭಾಗಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಮಾರ್ಕೋ ಯಾನ್ಸನ್ ಫಿಟ್ ಆದರೆ ಶಾನ್ ಅಬೋಟ್ ಸ್ಥಾನ ಬಿಟ್ಟುಕೊಡುತ್ತಾರೆ. ಶ್ರೇಯಸ್ ಗೋಪಾಲ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಫಿಟ್ ಆದರೆ ಅವರಿಗೆ ಸ್ಥಾನ ಕೊಡಬೇಕಾಗುತ್ತದೆ. ಟಿ ನಟರಾಜನ್, ಭುನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ವೇಗ ಹಾಗೂ ಸ್ವಿಂಗ್ ಬೌಲಿಂಗ್ನ ಚತುರರು.
ವಾಂಖೆಡೆಯಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೌಲರ್ಗಳ ಮೇಲೆ ಹೆಚ್ಚು ಗಮನ ಇಡಲಾಗಿದೆ. ದೊಡ್ಡ ಮೊತ್ತ ಇಲ್ಲಿ ಬಾರದೇ ಇದ್ದರೂ ಪೈಪೋಟಿ ನೀಡಲು ಸಾಧಾರಣಾ ಮೊತ್ತವಂತೂ ಬೇಕೇ ಬೇಕು.