ಇದು ಕೇವಲ ಐಪಿಎಲ್ನ ಲೀಗ್ ಮ್ಯಾಚ್ ಅಲ್ಲ. ಲೆಕ್ಕಾಚಾರದವೇ ತುಂಬಿರುವ ಗಣಿ. ಇಲ್ಲಿ ರಾಯಲ್ ಚಾಲೆಂಜರ್ಸ್ ಗೆದ್ದರೆ ಪ್ಲೇ-ಆಫ್ ಸ್ಥಾನ ಮತ್ತಷ್ಟು ಹತ್ತಿರ. ಪಂಜಾಬ್ ಸೋತರೆ ಟೂರ್ನಿಯಿಂದ ಔಟ್. ಹೀಗಾಗಿ ಬ್ರಬೋರ್ನ್ನಲ್ಲಿ ನಡೆಯುವ ಈ ಮ್ಯಾಚ್ ಸಿಕ್ಕಾಪಟ್ಟೆ ಮಹತ್ವ ಪಡೆದುಕೊಂಡಿದೆ.
ಪಂಜಾಬ್ ಲೆಕ್ಕಾಚಾರ ಸಿಂಪಲ್. ಉಳಿದಿರುವ 3 ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ-ಆಫ್ ಅವಕಾಶ ಸಿಗಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಪಂದ್ಯಗಳನ್ನು ಆಡಿ 14 ಅಂಕ ಪಡೆದಿದ್ದರೂ ಕಳಪೆ ರನ್ ರೇಟ್ ಕ್ವಾಲಿಫಿಕೇಶನ್ ಸ್ಥಾನಕ್ಕೆ ಭೀತಿ ಒಡ್ಡುತ್ತಿದೆ. ಹೀಗಾಗಿ ಇನ್ನೊಂದು ಪಂದ್ಯ ಗೆಲ್ಲುವ ಲೆಕ್ಕಾಚಾರವಂತೂ ಇದ್ದೇ ಇದೆ.
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಪಂಜಾಬ್ ಕಿಂಗ್ಸ್ ವಿರುದ್ಧ 13 ಇನ್ನಿಂಗ್ಸ್ ಗಳಲ್ಲಿ 702 ರನ್ ಗಳಿಸಿದ್ದಾರೆ. ಮೊದಲ ಬಾರಿ ಮುಖಾಮುಖಿಯಾಗಿದ್ದಗಲೂ ಈ ಬಾರಿ ಫಾಫ್ 88 ರನ್ ಗಳಿಸಿದ್ದರು. ಹೀಗಾಗಿ ಆರ್ಸಿಬಿ ನಾಯಕನಿಂದ ಇನ್ನೊಂದು ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಇದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಪಾರ್ಟಿ ಸೇರಿಕೊಂಡರೆ ರನ್ ಬೆಟ್ಟ ಕಟ್ಟಬಹುದು. ರಹತ್ ಪಾಟಿದರ್ ಮತ್ತು ಮಹಿಪಾಲ್ ಲೊಮ್ರೊರ್ ಇಂಪ್ಯಾಕ್ಟ್ ಪ್ಲೇಯರ್ಸ್. ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಕೂಡ ಗ್ರೇಟ್ ಟಚ್ ನಲ್ಲಿದ್ದಾರೆ.
ಬೌಲಿಂಗ್ನಲ್ಲಿ ಜೋಶ್ ಹ್ಯಾಜಲ್ ವುಡ್ ಹೊಸ ಆಯಾಮವನ್ನು ತಂದುಕೊಟ್ಟಿದ್ದಾರೆ. ಹರ್ಷಲ್ ವಿಕೆಟ್ ಬೇಟೆ ನೆಮ್ಮದಿ ತಂದಿದೆ. ಮೊಹಮ್ಮದ್ ಸಿರಾಜ್ ದುಬಾರಿ ಆದರೂ ತಂಡಕ್ಕೆ ಬೇಕೇ ಬೇಕು. ವನಿಂದು ಹಸರಂಗ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ. ಮ್ಯಾಕ್ಸ್ ವೆಲ್, ಶಹಬಾಸ್ ಮತ್ತು ಲೊಮ್ರೊರ್ ಕೂಡ ಬೌಲಿಂಗ್ ಮಾಡಬಲ್ಲರು.
ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ನಲ್ಲಿ ಸುಧಾರಿಸಿದೆ. ಜಾನಿ ಬೇರ್ ಸ್ಟೋವ್ ಆರಂಭಿಕರಾಗಿ ತಂಡಕ್ಕೆ ನೆರವಾಗಿದ್ದಾರೆ. ಶಿಖರ್ ದೊಡ್ಡ ಇನ್ನಿಂಗ್ಸ್ ಕಟ್ಟುವುದರಲ್ಲಿ ನಿಸ್ಸೀಮ. ಭಾನುಕಾ ರಾಜಪಕ್ಸ ಮತ್ತು ಲಿಯಂ ಲಿವಿಂಗ್ ಸ್ಟೋನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿದ್ದರೆ ಡೇಂಜರಸ್. ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಕೂಡ ಬಿಗ್ ಹಿಟ್ಟರ್ ಗಳೇ. ರಿಷಿ ಧವನ್ ಆಲ್ ರೌಂಡರ್. ರಾಹುಲ್ ಚಹರ್ ಸ್ಪಿನ್ನರ್. ಕಗಿಸೋ ರಬಾಡಾ, ಆರ್ಶದೀಪ್ ಸಿಂಗ್ ಮತ್ತು ಸಂದೀಪ್ ಶರ್ಮಾ ಬೌಲಿಂಗ್ ಅಸ್ತ್ರಗಳು.
ಬ್ರೆಬೋರ್ನ್ ಮೈದಾನ ಬ್ಯಾಟಿಂಗ್ ಪ್ರೆಂಡ್ಲಿ ಅನ್ನುವ ಬಗ್ಗೆ ಎರಡು ಮಾತಿಲ್ಲ. ಆದರೆ ಎರಡೂ ತಂಡಗಳ ಬ್ಯಾಟ್ಸ್ಮನ್ ಗಳ ಆಟ ಹೇಗಿರುತ್ತದೆ ಅನ್ನುವುದೇ ಪ್ರಶ್ನೆಯಾಗಿದೆ.