ಗೆದ್ದವರ ಪ್ಲೇ-ಆಫ್ ಆಸೆ ಜೀವಂತವಾಗಿರುತ್ತದೆ. ಸೋತವರ ಪ್ಲೇ-ಆಫ್ ಕನಸು ಲೆಕ್ಕಾಚಾರದಲ್ಲಿ ನಿಂತಿರುತ್ತದೆ. ಹೀಗಾಗಿ ಪುಣೆಯಲ್ಲಿ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಬಹಳ ಮಹತ್ವ ಪಡೆದಿದೆ.
ಆರ್ಸಿಬಿಗೆ ಇದು 11ನೇ ಪಂದ್ಯ. 10 ಪಂದ್ಯಗಳಲ್ಲಿ 10 ಅಂಕ ಮಾತ್ರ ಪಡೆದು 6ನೇ ಸ್ಥಾನಕ್ಕೆ ಜಾರಿದೆ. ಜೊತೆಗೆ ಮೈನಸ್ ರನ್ ರೇಟ್ ಕೂಡ ಲೆಕ್ಕಾಚಾರದಲ್ಲಿ ಹೊಡೆತ ಕೊಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ಗೆ ಇದು 10ನೇ ಪಂದ್ಯ. 3 ಪಂದ್ಯ ಮಾತ್ರ ಗೆದ್ದಿರುವ 6 ಅಂಕ ಪಡೆದು 9ನೇ ಸ್ಥಾನದಲ್ಲಿದೆ. ಈ ಪಂದ್ಯ ಸಿಎಸ್ಕೆ ಗೆದ್ದರೂ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ. ಆದರೆ ಆರ್ಸಿಬಿ ಸೋತರೆ ಕೊನೆಯ 3 ಪಂದ್ಯ ಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಬೀಳುತ್ತದೆ.
ತಂಡಗಳ ಬಗ್ಗೆ ಹೇಳುವುದಾದರೇ ಚೆನ್ನೈ ಬೌಲಿಂಗ್ ವೀಕ್ ಆರ್ ಸಿಬಿಯ ಬ್ಯಾಟಿಂಗ್ ವೀಕ್ ಅನ್ನುವ ಹಾಗಿದೆ. ಆರ್ ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮೂಲಕ ಆಟ ಆರಂಭಿಸಿದರೂ ವೇಗದ ಆರಂಭ ಸಿಗುತ್ತಿಲ್ಲ. ರಜತ್ ಪಾಟೀದಾರ್ ಕಳೆದ ಪಂದ್ಯದಲ್ಲಿ ಮಿಂಚಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್ ನಿರೀಕ್ಷಿತ ಆಟ ಆಡಿಲ್ಲ. ಲೊಮ್ರೊರ್, ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಮಾತ್ರ ನಂಬಿಕಸ್ಥರಾಗಿದ್ದಾರೆ. ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಆಲ್ ರೌಂಡರ್ ಗಳಾದರೂ ಬ್ಯಾಟಿಂಗ್ ಕೊಡುಗೆ ಇಲ್ಲ.
ಬೌಲಿಂಗ್ ನಲ್ಲಿ ಆರ್ ಸಿಬಿ ಉತ್ತಮ ಕಾಂಬಿನೇಷನ್ ಹೊಂದಿದೆ. ಮೊಹಮ್ಮದ್ ಸಿರಾಜ್ ದುಬಾರಿ ಬೌಲರ್ ಆದರೂ ತಂಡಕ್ಕೆ ಬೇಕೇ ಬೇಕು. ಜೋಶ್ ಹ್ಯಾಜಲ್ ವುಡ್ ಹೊಸ ಜೋಶ್ ತಂದಿದ್ದಾರೆ. ಹರ್ಷಲ್ ಪಟೇಲ್ ದುಬಾರಿ ಆದರೂ ಎದುರಾಳಿಗಳು ತಿಣುಕಾಡುತ್ತಾರೆ. ವನಿಂದು ಲೆಗ್ ಸ್ಪಿನ್ ವಿಕೆಟ್ ತಂದುಕೊಟ್ಟಿದೆ. ಲೊಮ್ರೊರ್, ಮ್ಯಾಕ್ಸ್ ವೆಲ್ ಮತ್ತು ಶಹಬಾಸ್ ಕೂಡ ಬೌಲಿಂಗ್ ನಲ್ಲಿ ಜೋಡಿಸಬೇಕು.
ಚೆನ್ನೈ ತಂಡಕ್ಕೆ ಬ್ಯಾಟಿಂಗ್ ದೊಡ್ಡ ಸಮಸ್ಯೆ ಆಗಿಲ್ಲ. ರುತುರಾಜ್ ಮಿಂಚಿನ ಆಟ ಆರಂಭಿಸಿದ್ದಾರೆ. ಡೆವೊನ್ ಕಾನ್ವೆ ತಾನಾಡಿದ 2ನೇ ಪಂದ್ಯದಲ್ಲೇ ಮಿಂಚಿದ್ದಾರೆ. ಅಂಬಟಿ ರಾಯುಡು ಮತ್ತು ರಾಬಿನ್ ಉತ್ತಪ್ಪ ಕೂಡ ಉತ್ತಮ ಲಯದಲ್ಲಿದ್ದಾರೆ. ಶಿವಂ ದುಬೆಯನ್ನು ಆಡಿಸುವುದು ಖಚಿತ. ಜಡೇಜಾ, ಧೋನಿ ಮತ್ತು ಬ್ರಾವೋ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ.
ಚೆನ್ನೈ ಬೌಲಿಂಗ್ ನಲ್ಲಿ ಕೊಂಚ ವೀಕ್ ಇದೆ. ಮುಖೇಶ್ ಚೌಧರಿ ಮತ್ತು ಸಿಮ್ರಜಿತ್ ಸಿಂಗ್ ಗೆ ಅನುಭವ ಇಲ್ಲ. ಬ್ರಾವೋ, ಪ್ರಿಟೋರಿಯಸ್ ಡೆತ್ ಓವರ್ ಸ್ಪೆಷಲಿಸ್ಟ್ ಗಳು, ಜಡೇಜಾ ಮತ್ತು ಮಹೀಶ್ ತೀಕ್ಷಣ ಮೇಲೆ ಹೆಚ್ಚು ನಂಬಿಕೆ ಇದೆ.
ಪುಣೆಯ ಪಿಚ್ ಬ್ಯಾಟಿಂಗ್ ಸಹಕಾರ ಅನ್ನುವುದು ಎರಡೂ ತಂಡಗಳಿಗೂ ಗೊತ್ತಿದೆ. ಹೀಗಾಗಿ ಟೀಮ್ ಕಾಂಬಿನೇಷನ್ ಮತ್ತು ಟಾಸ್ ಬಗ್ಗೆ ಎಲ್ಲರ ಕಣ್ಣಿದೆ.