IPL 2022 – ಆರ್ ಸಿಬಿ ನಾಯಕತ್ವ ವಿಚಾರ – ವಿರಾಟ್ ಕೊಹ್ಲಿ ಮನದಲ್ಲಿ ಹೀಗೂ ಇರಬಹುದಲ್ವಾ ?

15ನೇ ಐಪಿಎಲ್ ಟೂರ್ನಿಗೆ ಈಗಾಗಲೇ ಫ್ರಾಂಚೈಸಿಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಎಸ್ ಆರ್ ಎಚ್, ರಾಜಸ್ತಾನ ರಾಯಲ್ಸ್, ಲಕ್ನೋ, ಅಹಮದಾಬಾದ್ ತಂಡಗಳ ನಾಯಕರು ಯಾರು ಎಂಬುದು ಗೊತ್ತಿದೆ.
ಆದ್ರೆ ಕೆಕೆಆರ್, ಆರ್ ಸಿಬಿ, ಪಂಜಾಬ್ ಕಿಂಗ್ಸ್ ತಂಡಗಳ ನಾಯಕರು ಯಾರು ಎಂಬುದು ಮೆಗಾ ಹರಾಜಿನ ಬಳಿಕವೇ ಗೊತ್ತಾಗಲಿದೆ.
ಈ ನಡುವೆ, ಆರ್ ಸಿಬಿಯ ಮುಂದಿನ ನಾಯಕ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಗೆ ದೊಡ್ಡ ಚಿಂತೆಯಾಗಿದೆ.
ಕಾರಣ, ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ ವೆಲ್ ನಂತಹ ಆಟಗಾರರನ್ನು ಸರಿದೂಗಿಸಿಕೊಂಡು ಹೋಗುವಂತಹ ನಾಯಕನ ಅಗತ್ಯತೆ ಆರ್ ಸಿಬಿಗಿದೆ. ತಂಡದಲ್ಲಿ ವಿಶ್ವದ ಶ್ರೇಷ್ಠ ಆಟಗಾರರು ಇರುವುದರಿಂದ ಅನುಭವಿ ನಾಯಕತ್ವ ಆರ್ ಸಿಬಿಗೆ ಬೇಕೇ ಬೇಕು. ಜೊತೆಗೆ ಬ್ರ್ಯಾಂಡ್ ಕೂಡ ಇರಬೇಕು.
ಈ ನಡುವೆ, ಕನ್ನಡಿಗ ಮನೀಷ್ ಪಾಂಡೆ ಆರ್ ಸಿಬಿ ನಾಯಕತ್ವದ ರೇಸ್ ನಲ್ಲಿದ್ದಾರೆ. ಮನೀಷ್ ಪಾಂಡೆ ಮತ್ತು ವಿರಾಟ್ ಕೊಹ್ಲಿ 19 ವಯೋಮಿತಿ ವಿಶ್ವಕಪ್ ನಲ್ಲಿ ಜೊತೆಯಾಗಿ ಆಡಿದ್ದಾರೆ. ಹಾಗೇ ಟೀಮ್ ಇಂಡಿಯಾದಲ್ಲೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮನೀಷ್ ಪಾಂಡೆ ಆಡಿದ್ದಾರೆ. ಜೊತೆಯಾಗಿಯೂ ಆಡಿದ್ದಾರೆ. ಇನ್ನೊಂದೆಡೆ ಆರ್ ಸಿಬಿ ಪರ ಆಡಿರುವ ಮನೀಷ್ ಪಾಂಡೆ ಐಪಿಎಲ್ ನಲ್ಲಿ ಚೊಚ್ಚಲ ಶತಕ ಕೂಡ ದಾಖಲಿಸಿದ್ದರು. ಜೊತೆಗೆ ಸ್ಥಳೀಯ ಆಟಗಾರನಾಗಿರುವುದರಿಂದ ಮನೀಷ್ ಪಾಂಡೆ ಈ ಬಾರಿ ಆರ್ ಸಿಬಿಯ ನಾಯಕತ್ವದ ಲೀಸ್ಟ್ ನಲ್ಲಿದ್ದಾರೆ ಎಂಬ ಊಹೆಗಳು ಇದ್ರೆ ಅದು ತಪ್ಪಾಗುತ್ತದೆ.
ಆದ್ರೆ ಆರ್ ಸಿಬಿಯ ಟೀಮ್ ಮ್ಯಾನೇಜ್ ಮೆಂಟ್ ಪ್ಲಾನ್ ಬೇರೇನೇ ಇದೆ. ಅನುಭವದ ಬದಲು ಯುವ ಆಟಗಾರರಿಗೆ ಮಣೆ ಹಾಕುವ ಲೆಕ್ಕಚಾರದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಮುಖ್ಯವಾಗಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶಾನ್ ಗೆ ನಾಯಕತ್ವ ನೀಡುವ ಸಾಧ್ಯತೆಗಳಿವೆ.
ಇದಕ್ಕೆ ಇನ್ನೊಂದು ಬಲವಾದ ಕಾರಣವೂ ಇದೆ. ವಿರಾಟ್ ಕೊಹ್ಲಿಯ ಮಾಸ್ಟರ್ ಪ್ಲಾನ್ ಕೂಡ ಇದೆ. ಶ್ರೇಯಸ್ ಅಯ್ಯರ್ ಅಥವಾ ಇಶಾನ್ ಕಿಶಾನ್ ಗೆ ನಾಯಕತ್ವ ನೀಡುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಟಾಂಗ್ ಕೊಡುವ ಲೆಕ್ಕಚಾರವೂ ವಿರಾಟ್ ಕೊಹ್ಲಿಯಲ್ಲಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಿಷಬ್ ಪಂತ್ ಗೆ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ರಿಷಬ್ ಪಂತ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅಥವಾ ಇಶಾನ್ ಕಿಶಾನ್ ಗೆ ನಾಯಕತ್ವ ಕೊಟ್ಟು ಆರ್ ಸಿಬಿ ಉತ್ತಮ ಪ್ರದರ್ಶನ ನೀಡಿದ್ರೆ ರಿಷಬ್ ಪಂತ್ ಸ್ಥಾನವನ್ನು ಇಶಾನ್ ಕಿಶಾನ್ ಆಕ್ರಮಿಸಿಕೊಳ್ಳಬಹುದು. ಹಾಗೇ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ನೀಡಿದ್ರೆ ರಿಷಬ್ ಪಂತ್ ಗೆ ಪರ್ಯಾಯವಾಗಿ ಬೆಳೆಸಬಹುದು ಎಂಬುದು ವಿರಾಟ್ ಮನಸ್ಸಲ್ಲಿದ್ರೆ ಅಚ್ಚರಿಪಡಬೇಕಾಗಿಲ್ಲ.