Anil Kumble – ಒಂದು ಇನಿಂಗ್ಸ್ .. ಹತ್ತೂ ವಿಕೆಟ್ .. ಅನಿಲ್ ಸಾಧನೆಗೆ 23ರ ಸವಿ ಸವಿ ನೆನಪು..!

23 ವರ್ಷಗಳ ಹಿಂದೆ. ಅಂದ್ರೆ 1999 ಫೆಬ್ರವರಿ 7. ಭಾರತದ ಚಾಂಪಿಯನ್ ಸ್ಪಿನ್ನರ್ ಅನಿಲ್ ಕುಂಬ್ಳೆ ವಿಶ್ವ ಕ್ರಿಕೆಟ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದ ದಿನ.
ಅದು, ದೆಹಲಿಯ ಫಿರೋಜ್ ಶಾ ಅಂಗಣ. (ಇವತ್ತಿನ ಅರುಣ್ ಜೇಟ್ಲಿ ಅಂಗಣ) ಬದ್ದ ವೈರಿ ಪಾಕಿಸ್ತಾನ ವಿರುದ್ದದ ಟೆಸ್ಟ್ ಪಂದ್ಯ. ಪಾಕಿಸ್ತಾನ ತಂಡದ ಎರಡನೇ ಇನಿಂಗ್ಸ್ ನಲ್ಲಿ ಅನಿಲ್ ಕುಂಬ್ಳೆ ಮಾರಕವಾಗಿ ಪರಿಣಮಿಸಿದ್ರು. ಪಾಕ್ ನ ಹತ್ತು ಬ್ಯಾಟ್ಸ್ ಮೆನ್ ಗಳು ಕೂಡ ಅನಿಲ್ ಕುಂಬ್ಳೆಗೆ ವಿಕೆಟ್ ಒಪ್ಪಿಸಿದ್ರು. ಪಾಕ್ ಬ್ಯಾಟ್ಸ್ ಮೆನ್ ಗಳು ಅನಿಲ್ ಗೆ ವಿಕೆಟ್ ಒಪ್ಪಿಸಬಾರದು ಅಂತ ಕ್ರೀಸ್ ಗೆ ಅಂಟಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದರು. ಆದ್ರೆ ಅನಿಲ್ ಕುಂಬ್ಳೆ ಬಿಡಲಿಲ್ಲ. ತನ್ನ ಬತ್ತಳಿಕೆಯಲ್ಲಿದ್ದ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿ ಪಾಕ್ ಬ್ಯಾಟ್ಸ್ ಮೆನ್ ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ಮಾಡುವಂತೆ ಮಾಡಿದ್ದರು.
Anil Kumble Picks 10 Wickets in an Innings Against Pakistan – On This Day in 1999
ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಇನಿಂಗ್ಸ್ ನ ಹತ್ತು ವಿಕೆಟ್ ಗಳನ್ನು ಪಡೆದ ವಿಶ್ವದ ಎರಡನೇ ಬೌಲರ್ ಆಗಿ ಅನಿಲ್ ಕುಂಬ್ಳೆ ಹೊರಹೊಮ್ಮಿದ್ರು. ಈ ಹಿಂದೆ 1956ರಲ್ಲಿ ಇಂಗ್ಲೆಂಡ್ ಜಿಮ್ ಲೆಕರ್ ಅವರು ಆಸ್ಟ್ರೇಲಿಯಾ ವಿರುದ್ದ ಹತ್ತು ವಿಕೆಟ್ ಗಳನ್ನು ಪಡೆದುಕೊಂಡು ದಾಖಲೆ ಬರೆದಿದ್ದು.
ಅನಿಲ್ ಕುಂಬ್ಳೆ ಮೊದಲ ಇನಿಂಗ್ಸ್ ನಲ್ಲಿ 75ಕ್ಕೆ 4 ವಿಕೆಟ್ ಉರುಳಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ 74ಕ್ಕೆ 10 ವಿಕೆಟ್ ಗಳನ್ನು ಪಡೆದುಕೊಂಡಿದ್ದರು.
ಅನಿಲ್ ಕುಂಬ್ಳೆ ಈ ಸಾಧನೆ ಮಾಡಿ 23 ವರ್ಷಗಳಾದ್ರೂ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯದ ಹೈಲೈಟ್ಸ್ ಅನ್ನು ನೋಡುತ್ತಾ ಅನಿಲ್ ಸಾಧನೆಯನ್ನು ಗುಣಗಾನ ಮಾಡುತ್ತಿರುತ್ತಾರೆ. ಟೀಮ್ ಇಂಡಿಯಾದ ಚಾಂಪಿಯನ್ ಬೌಲರ್ ಆಗಿರುವ ಅನಿಲ್ ಕುಂಬ್ಳೆ ಅವರು ಟೆಸ್ಟ್ ತಂಡದ ನಾಯಕನಾಗಿ 2008ರಲ್ಲಿ ವಿದಾಯ ಹೇಳಿದ್ದರು.
2021ರಲ್ಲಿ ನ್ಯೂಜಿಲೆಂಡ್ ಅಜಝ್ ಪಟೇಲ್ ಅವರು ಟೀಮ್ ಇಂಡಿಯಾ ವಿರುದ್ಧ ಮುಂಬೈನ ವಾಂಖೇಡೆ ಮೈದಾನದಲ್ಲಿ ಹತ್ತು ವಿಕೆಟ್ ಪಡೆದುಕೊಂಡಿದ್ದರು. ಈ ಮೂಲಕ ಟೆಸ್ಟ್ ಇನಿಂಗ್ಸ್ ನ ಹತ್ತು ವಿಕೆಟ್ ನ ಪಡೆದ ಮೂರನೇ ಬೌಲರ್ ಆಗಿ ಅಜಝ್ ಪಟೇಲ್ ಆಗಿದ್ದಾರೆ.