ರಾಜಸ್ಥಾನ ರಾಯಲ್ಸ್ ಶನಿವಾರ ಮುಂಬೈ ವಿರುದ್ಧದ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಗಟ್ಟಿ ಮಾಡಿಕೊಂಡಿದೆ. ಪಂಜಾಬ್ ವಿರುದ್ಧದ ಗೆಲುವಿನಲ್ಲಿ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಶಿಮ್ರನ್ ಹೆಟ್ಮಯರ್ ಕಾಣಿಕೆ ದೊಡ್ಡದಿತ್ತು. 16 ಎಸೆತಗಳಲ್ಲಿ ಅಜೇಯ 31 ರನ್ ಸಿಡಿಸಿ ಹೆಟ್ಮಯರ್ ರಾಯಲ್ಸ್ಗೆ ಗೆಲುವಿನ ಕಾಣಿಕೆ ನೀಡಿದ್ದರು. ಆದರೆ ಭಾನುವಾರ ಮುಂಜಾನೆಯೆಯೇ ರಾಯಲ್ಸ್ ತಂಡಕ್ಕೆ ಶಾಕ್ ಎದುರಾಗಿದೆ. ಹೆಟ್ಮಯರ್ ತವರು ಗಯಾನಾಕ್ಕೆ ಹಾರಿದ್ದಾರೆ.
25 ವರ್ಷದ ಎಡಗೈ ಬ್ಯಾಟ್ಸ್ಮನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ತವರಿಗೆ ತೆರಳಿದ್ದಾರೆ. ಆದರೆ ಅವರು ಮೇ 24ರ ಒಳಗೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಐಪಿಎಲ್ ಲೀಗ್ ಹಂತದಲ್ಲಿ ರಾಯಲ್ಸ್ 11 ಪಂದ್ಯವನ್ನು ಆಡಿ ಮುಗಿಸಿ 14 ಅಂಕ ಪಡೆದಿದೆ. ಕೊನೆಯ 3 ಪಂದ್ಯಗಳು ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯಗಳಿಗೆ ಹೆಟ್ಮಯರ್ ಅಲಭ್ಯರಾಗಲಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಹೆಟ್ಮಯರ್ ರಾಜಸ್ಥಾನ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದರು. 11 ಪಂದ್ಯಗಳಲ್ಲಿ 72 ರ ಸರಾಸರಿಯಂತೆ 291 ರನ್ಗಳಿಸಿದ್ದಾರೆ. 7 ಬಾರಿ ನಾಟೌಟ್ ಆಗಿ ಉಳಿದಿದ್ದರು. 17 ರಿಂದ 20 ಓವರುಗಳಲ್ಲಿ 214.28ರ ಸ್ಟ್ರೈಕ್ ರೇಟ್ ಹೊಂದಿ ಬೆಸ್ಟ್ ಫಿನಿಷರ್ ಆಗಿ ಮಿಂಚಿದ್ದರು. ಹೆಟ್ಮಯರ್ ಅಲಭ್ಯತೆಯಲ್ಲಿ ರಾಯಲ್ಸ್ ಬೆಸ್ಟ್ ಫಿನಿಷರ್ಗಾಗಿ ಹುಡುಕಾಡಬೇಕಿದೆ. ಜೇಮ್ಸ್ ನೀಶಾಮ್, ಡೆರಿಲ್ ಮಿಚೆಲ್, ಕರುಣ್ ನಾಯರ್, ರಾಸಿ ವಾಂಡರ್ ಡ್ಯುಸೆನ್ ನಡುವೆ ಯಾರಾದರು ಒಬ್ಬರು ಹೆಟ್ಮಯರ್ ಸ್ಥಾನ ತುಂಬಬಹುದು ಎಂದು ನಿರೀಕ್ಷೆ ಮಾಡಲಾಗಿದೆ.