ರಾಹುಲ್ ತೆವಾಟಿಯಾ… ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಬೆಚ್ಚಿ ಬೀಳಿಸುವ ಪ್ರದರ್ಶನ ನೀಡಿದ ಆಟಗಾರ. ಕೊನೆಯ ಎರಡು ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಪಂಜಾಬ್ ಲೆಕ್ಕಾಚಾರ ತಲೆಕೆಳಗೆ ಮಾಡಿ ಗುಜರಾತ್ ತಂಡಕ್ಕೆ ಗೆಲುವು ತಂದುಕೊಟ್ಟ ತೇವಾಟಿಯಾ ಸೂಪರ್ ಹೀರೋ ಆಗಿ ಮೆರೆದಾಡುತ್ತಿದ್ದಾರೆ. ಸತತ ಎರಡು ಸಿಕ್ಸರ್ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟ ತೇವಾಟಿಯಾ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ.
ಐಪಿಎಲ್ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟ ಆಟಗಾರರು ಇಬ್ಬರೇ. ಮೊದಲನೆಯವರು ಮಹೇಂದ್ರ ಸಿಂಗ್ ಧೋನಿಯಾದರೆ, 2ನೇಯವರು ರಾಹುಲ್ ತೇವಾಟಿಯಾ. 2016ರಲ್ಲಿ ರೈಸಿಂಗ್ ಪುಣೆ ತಂಡದ ಪರವಾಗಿ ಆಡಿದ್ದ ಧೋನಿ ಕೊನೆಯ ಓವರ್ನ ಕೊನೆಯ 2 ಎಸೆತಗಳಲ್ಲಿ ಸಿಕ್ಸರ್ಗೆ ಅಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಈ ಬಾರಿ ರಾಹುಲ್ ತೆವಾಟಿಯಾ ಓಡಿನ್ ಸ್ಮಿತ್ ಓವರ್ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ ಅಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅಚ್ಚರಿ ಅಂದರೆ ಧೋನಿ ಮತ್ತು ತೇವಾಟಿಯಾ ಇಬ್ಬರೂ ಪಂಜಾಬ್ ಕಿಂಗ್ಸ್ ವಿರುದ್ಧವೇ ಈ ಸಾಧನೆ ಮಾಡಿದ್ದಾರೆ.
ತೇವಾಟಿಯ ಇನ್ನೂ ಒಂದು ಹೊಸ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಐಪಿಎಲ್ ಪಂದ್ಯದ ಕೊನೆಯ ಎಸೆತದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ರನ್ ಬಾರಿಸಿದ 4ನೇ ಬ್ಯಾಟರ್ ಆಗಿ ತೇವಾಟಿಯಾ ದಾಖಲೆ ಬರೆದಿದ್ದಾರೆ. ಈ ಹಿಂದೆ ಧೋನಿ, ಬ್ರಾವೋ ಮತ್ತು ಕೆ.ಎಸ್. ಭರತ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈಗ ತೇವಾಟಿಯಾ ಈ ಸಾಧನೆ ಮಾಡಿದ್ದಾರೆ. ಒಟ್ಟಿನಲ್ಲಿ ತೆವಾಟಿಯ ಒಂದು ಇನ್ನಿಂಗ್ಸ್ ಹಲವು ದಾಖಲೆಗಳಿಗೆ ಕಾರಣವಾಗಿದೆ.