Rahul dravid – ಹಳೆಯ ಘಟನೆ.. ಹೊಸ ಸುದ್ದಿ..! ಸುದ್ದಿಗೋಷ್ಠಿಯಿಂದ ಈತನನ್ನು ಹೊರಗೆ ಕಳಿಸಿ..! ಪಾಕ್ ಪತ್ರಕರ್ತನ ಚಳಿ ಬಿಡಿಸಿದ್ದ ಕ್ರಿಕೆಟ್ ಬುದ್ಧ ದ್ರಾವಿಡ್..!
ಇವತ್ತು ನಾವು ಮಹೇಂದ್ರ ಸಿಂಗ್ ಧೋನಿಯವರನ್ನು ಕೂಲ್ ಕ್ಯಾಪ್ಟನ್ ಅಂತ ಕರೆಯುತ್ತೇವೆ. ಆದ್ರೆ ನೆನಪಿಡಿ.. ಧೋನಿಗಿಂತಲೂ ಮೈದಾನದಲ್ಲಿ ಕೂಲ್ ಆಗಿ ಇರುತ್ತಿದ್ದದ್ದು ನಮ್ಮ ರಾಹುಲ್ ದ್ರಾವಿಡ್.
ಹೌದು, ಎಂಥ ಸನ್ನಿವೇಶಗಳೇ ಇರಲಿ, ರಾಹುಲ್ ದ್ರಾವಿಡ್ ವರ್ತನೆ ಯಾವತ್ತೂ ಬದಲಾವಣೆಯಾಗಲ್ಲ. ಶಾಂತ ಚಿತ್ತವಾಗಿರುವ ದ್ರಾವಿಡ್ ತಾಳ್ಮೆ ಮತ್ತು ಬದ್ದತೆಗೆ ಮತ್ತೊಂದು ಹೆಸರು. ಕ್ಲಾಸ್, ಕನ್ಸಿಸ್ಟೆನ್ಸಿ ಮತ್ತು ಕಮೀಟ್ ಮೆಂಟ್. ಇದು ರಾಹುಲ್ ದ್ರಾವಿಡ್ ಅವರ ಬದುಕಿನ ಸೂತ್ರಗಳು. ಇದನ್ನು ಅವರು ಯಾವತ್ತು ಮರೆತಿಲ್ಲ. ಮರೆಯುವುದು ಇಲ್ಲ. ಅದಕ್ಕಾಗಿಯೇ ರಾಹುಲ್ ದ್ರಾವಿಡ್ ಅವರನ್ನು ಕ್ರಿಕೆಟ್ ಜಗತ್ತಿನ ಬುದ್ಧ ಅಂತ ಕರೆಯುವುದು.
ಹಾಗಂತ ರಾಹುಲ್ ದ್ರಾವಿಡ್ ಗೆ ಸಿಟ್ಟು ಬರುವುದಿಲ್ಲ ಅಂತಿಲ್ಲ. ಕೆಲವೊಂದು ಬಾರಿ ಸಿಟ್ಟು ಕೂಡ ಮಾಡಿಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮಹೇಂದ್ರ ಸಿಂಗ್ ಅವರಿಗೆ ಬೈದಿರುವುದು. ಅನಗತ್ಯ ಹೊಡೆತಕ್ಕೆ ಮುಂದಾಗ ಕುಪಿತಗೊಂಡ ರಾಹುಲ್ ಧೋನಿ ವಿರುದ್ಧವೇ ತಿರುಗಿಬಿದ್ದಿದ್ದರು. ಈ ರೀತಿಯ ಘಟನೆಗಳು ಕೆಲವೊಂದು ಬಾರಿ ಮೈದಾನದಲ್ಲಿ ಆಗಿವೆ.
ಇನ್ನು 2004ರಲ್ಲಿ ಟೀಮ್ ಇಂಡಿಯಾ ಪಾಕ್ ಪ್ರವಾಸ ಕೈಗೊಂಡಿತ್ತು. ಸರಣಿಯಲ್ಲಿ ಟೀಮ್ ಇಂಡಿಯಾ 1-2ರಿಂದ ಹಿನ್ನಡೆಯಲ್ಲಿತ್ತು. ಅಂತಿಮ ಪಂದ್ಯದಲ್ಲಿ ಪಾಕ್ ತಂಡವನ್ನು ಸೋಲಿಸಿ ಸರಣಿಯನ್ನು ಸಮಗೊಳಿಸಿತ್ತು. ಈ ಪಂದ್ಯದಲ್ಲಿ ಇಂಜಮಮ್ ಉಲ್ ಹಕ್ ಶತಕ ದಾಖಲಿಸಿದ್ರೆ, ರಾಹುಲ್ ದ್ರಾವಿಡ್ ಅಜೇಯ 76 ರನ್ ಮತ್ತು ಮಹಮ್ಮದ್ ಕೈಫ್ ಅಜೇಯ 71 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ನಂತರ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾದ ನಾಯಕನಾಗಿದ್ದ ರಾಹುಲ್ ದ್ರಾವಿಡ್ ಮತ್ತು ಪಾಕ್ ನಾಯಕನಾಗಿದ್ದ ಇಂಜಮಮ್ ಉಲ್ ಹಕ್ ಗೆ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗೈದ್ರು. ಎಲ್ಲಾ ಪ್ರಶ್ನೆಗಳಿಗೆ ಕೂಲ್ ಆಗಿಯೇ ಇಬ್ಬರು ನಾಯಕರು ಉತ್ತರಿಸುತ್ತಿದ್ದರು. Rahul Dravid got angry at a Pakistani journalist
ಆಗ ಪಾಕ್ ಪತ್ರಕರ್ತ ಮ್ಯಾಚ್ ಫಿಕ್ಸಿಂಗ್ ಆರೋಪದ ಪ್ರಶ್ನೆ ಕೇಳಿದ್ದ. ಇದಕ್ಕೆ ಮೊದಲು ಉತ್ತರಿಸಿದ್ದ ಇಂಜಮಮ್ ಉಲ್ ಹಕ್ ಶಟ್ ಅಪ್ ಅಂತ ಹೇಳಿ ಸುಮ್ಮನಾದ್ರು.
ಆದ್ರೆ ನಮ್ಮ ರಾಹುಲ್ ದ್ರಾವಿಡ್ ಸುಮ್ಮನಾಗಲಿಲ್ಲ. ನಾನ್ ಸೆನ್ಸ್.. ಈತನನ್ನು ಸುದ್ದಿಗೊಷ್ಠಿಯಿಂದ ಹೊರಗೆ ಕಳಿಸುತ್ತೀರಾ ಅಂತ ಸಿಟ್ಟಿನಿಂದಲೇ ಹೇಳಿದ್ರು. ಅಲ್ಲದೆ ಈ ವಿಚಾರಗಳು ಕ್ರೀಡೆಯ ಘನತೆಯನ್ನು ಹಾಳು ಮಾಡುತ್ತವೆ ಎಂದು ಸಿಟ್ಟಿನಿಂದಲೇ ಹೇಳಿದ್ದರು.
ಹೀಗೆ ರಾಹುಲ್ ದ್ರಾವಿಡ್ ಸಿಟ್ಟುಗೊಂಡಾಗ ಹೇಗೆ ವರ್ತಿಸುತ್ತಾರೆ ಎಂಬುದಕ್ಕೆ ಒಂದು ನಿದರ್ಶನ ಅಷ್ಟೇ.