15ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಜೇಸನ್ ರಾಯ್ ಅವರ ಅನುಪಸ್ಥಿತಿಯ ಆಘಾತ ಕಂಡಿದ್ದ ಗುಜರಾತ್ ಟೈಟನ್ಸ್, ಈ ಸ್ಥಾನಕ್ಕೆ ಇದೀಗ ಬದಲಿ ಆಟಗಾರನನ್ನ ಸೇರ್ಪಡೆ ಮಾಡಿಕೊಂಡಿದೆ.
ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸಮನ್ ಜೇಸನ್ ರಾಯ್, ಧೀರ್ಘಾವಧಿವರೆಗೆ ಬಬಲ್ನಲ್ಲಿ ಇರಲು ಒಪ್ಪದ ಹಿನ್ನೆಲೆಯಲ್ಲಿ ಪ್ರಸಕ್ತ ಸೀಸನ್ನ ಐಪಿಎಲ್ನಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಆದರೆ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ದೊಡ್ಡಮಟ್ಟದ ಯಶಸ್ಸು ಕಾಣಲು ಸಜ್ಜಾಗಿರುವ ಗುಜರಾತ್ ಟೈಟನ್ಸ್, ಜೇಸನ್ ರಾಯ್ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ ಮಾಡಿದ್ದು, ಅಫ್ಘಾನಿಸ್ಥಾನದ ಸ್ಪೋಟಕ ಬ್ಯಾಟ್ಸಮನ್, ರಹಮಾನುಲ್ಲಾ ಗುರ್ಬಾಜ್ ಅವರನ್ನ ನಿಯೋಜಿಸಿದೆ.
ಟಿ20 ಕ್ರಿಕೆಟ್ನಲ್ಲಿ 150ರ ಸ್ಟ್ರೈಕ್ ರೇಟ್ ಹೊಂದಿರುವ ಆರಂಭಿಕ ಬ್ಯಾಟ್ಸಮನ್ ಗುರ್ಬಾಜ್, ಉತ್ತಮ ಆಯ್ಕೆಯಾಗಿದ್ದಾರೆ. ಬ್ಯಾಟಿಂಗ್ನಲ್ಲಿ ಕಮಾಲ್ ಮಾಡುವ ಸಾಮರ್ಥ್ಯ ಹೊಂದಿರುವ 20 ವರ್ಷದ ಗುರ್ಬಾಜ್, ಆಡಿರುವ 69 ಟಿ20 ಪಂದ್ಯಗಳಲ್ಲಿ 113 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 9 ODI ಹಾಗೂ 12 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಆದರೆ ಸದ್ಯ ರಹಮಾನುಲ್ಲಾ ಗುರ್ಬಾಜ್ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಅಧಿಕೃತವಾಗಿ ಘೋಷಣೆ ಮಾಡಲು ಗುಜರಾತ್ ಟೈಟನ್ಸ್, ಬಿಸಿಸಿಐ ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದೆ. ಗುರ್ಬಾಜ್ ತಂಡಕ್ಕೆ ಸೇರ್ಪಡೆಯಾದರೆ ಗುಜರಾತ್ ತಂಡದ ವಿಕೆಟ್ ಕೀಪಿಂಗ್ ಸಮಸ್ಯೆ ಕೂಡ ಬಗೆಹರಿಯಲಿದೆ. ಅಫ್ಘಾನ್ ಆಟಗಾರನ ಸೇರ್ಪಡೆ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಆಶಿಶ್ ನೆಹರಾ ಅವರ ಚಿಂತೆಯನ್ನ ಕಡಿಮೆ ಮಾಡಿದೆ.