ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಪದಕಗಳನ್ನು ಗೆದ್ದು ಹಲವು ಬಾರಿ ಸುದ್ದಿಯಲ್ಲಿರುತ್ತಾರೆ. ಇನ್ನು ಕೆಲವೊಮ್ಮೆ ಸುಪ್ರಸಿದ್ಧ ಹಾಡಿಗೆ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ. ಆದರೆ ಈಗ ಏಷ್ಯಾ ಕಪ್ (ಬಿಎಸಿ) ಪಂದ್ಯಾವಳಿಯ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದ ಕುರಿತು ವರದಿಯಾಗಿದೆ.
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಸಿಂಧು, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಮಹಿಳಾ ಸಿಂಗಲ್ಸ್ ಸೆಮಿಫೈನಲ್ಸ್ ಪಂದ್ಯದಲ್ಲಿ ಸಿಂಧು ಹಾಗೂ ಅಂಪೈರ್ ನಡುವೆ ನಡೆದ ಚಕಮಕಿ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯದ ಸಮಯದಲ್ಲಿ ಅಂಪೈರ್ ನೀಡಿದ ಕೆಲ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಸಿಂಧು, ನಿರ್ಣಾಯಕರ ಜೊತೆ ಮಾತಿನ ಚಕಮಕಿ ನಡೆಸುವ ಮೂಲಕ ತಮಗಾದ ಅಸಮಮಾಧಾನ ವ್ಯಕ್ತಪಡಿಸಿದರು. ಈ ಕುರಿತಾದ ವಿಡಿಯೋ ಒಂದು ವೈರಲ್ ಆಗಿದ್ದು, ಈ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ವಿಡಿಯೋದಲ್ಲಿ ಸಿಂಧು, ಅಂಪೈರ್ ಜೊತೆಗೆ ಮಾತಿನ ಚಕಮಕಿ ನಡೆಸಿರುವ ದೃಶ್ಯವಿದೆ.

ಪಂದ್ಯದ ವೇಳೆ ಪಿ ವಿ ಸಿಂಧು ತಾಳ್ಮೆ ಕಳೆದುಕೊಂಡು ಚೇರ್ ಅಂಪೈರ್ ವಿರುದ್ಧ ಮೈದಾನದಲ್ಲಿಯೇ ವಾಗ್ದಾಳಿ ನಡೆಸಿರುವ ಘಟನೆ ನಡೆಯಿತು. ಪಂದ್ಯದ ಎರಡನೇ ಗೇಮ್ ಸಂದರ್ಭದಲ್ಲಿ ಪಿವಿ ಸಿಂಧು ಸರ್ವ್ ಮಾಡುವುದರಲ್ಲಿ ವಿಳಂಬ ಮಾಡಿದರು ಎಂಬ ಕಾರಣಕ್ಕೆ ಚೇರ್ ಅಂಪೈರ್ ಪೆನಾಲ್ಟಿ ಹೇರಿದರು. ತೀರ್ಪುಗಾರರ ಈ ನಿರ್ಧಾರದಿಂದ ತೀವ್ರ ಕುಪಿತಗೊಂಡ ಪಿ.ವಿ ಸಿಂಧು ಆ ಗೇಮ್‌ನಲ್ಲಿ ಕಡಿಮೆ ಅಂತರದಲ್ಲಿ ಸೋಲನ್ನು ಅನುಭವಿಸಿದರು.

ಈ ಸಂದರ್ಭದಲ್ಲಿ ಇಬ್ಬರ ನಡುವಿನ ವಾಗ್ವಾದ ಹೆಚ್ಚಾಗುವುದನ್ನು ಗಮನಿಸಿದ ಮುಖ್ಯ ತೀರ್ಪುಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಯಥಾಸ್ಥಿತಿಗೆ ತರುವತ್ತ ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಮುಖ್ಯ ತೀರ್ಪುಗಾರರ ಜೊತೆ ಕೆಲ ಸಮಯ ಮಾತನಾಡಿದ ಪಿ ವಿ ಸಿಂಧು ತಾನು ಸರ್ವ್ ಮಾಡಲು ಸಿದ್ಧರಿದ್ದರೂ ಸಹ ಎದುರಾಳಿ ಸಿದ್ಧರಿರಲಿಲ್ಲ ಹೀಗಾಗಿ ಸರ್ವ್ ಮಾಡುವುದು ತಡವಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಪಿ .ವಿ. ಸಿಂಧು ಚೇರ್ ಅಂಪೈರ್ ವಿರುದ್ಧ ವಾಗ್ವಾದ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕೇನ್ ಯಮಗುಚಿ, ಪಿ.ವಿ.ಸಿಂಧು ಅವರನ್ನು ಮೂರು ಸೆಟ್‌ಗಳ ಹೋರಾಟದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.