Pro Kabaddi: ಜೈಂಟ್ಸ್ ಗೆ ಜಯ, ಅಂಕಪಟ್ಟಿಯಲ್ಲಿ ಬಡ್ತಿ
ಪ್ರೋ ಕಬಡ್ಡಿ ಲೀಗ್ನ 28ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 51-45 ಅಂತರದಲ್ಲಿ ಯುಪಿ ಯೋಧಾಸ್ ವಿರುದ್ಧ ಜಯ ಗಳಿಸಿತು.
ನಾಯಕ ಚಂದ್ರನ್ ರಂಜಿತ್ (20) ಹಾಗೂ ರಂಜಿತ್ (16) ರೈಡಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗುಜರಾತ್ ಜೈಂಟ್ಸ್ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಜಯ ಗಳಿಸಿತು. ಈ ಜಯದೊಂದಿಗೆ ಗುಜರಾತ್ ಜೈಂಟ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿಯಿತು.
ಯುಪಿ ಯೋಧಾಸ್ ಪರ ಪ್ರದೀಪ್ ನರ್ವಾಲ್ (17 )ಹಾಗೂ ಸುರಿಂದರ್ ಗಿಲ್ (14) ಉತ್ತಮ ರೈಡಿಂಗ್ ಪ್ರದರ್ಶನ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಉತ್ತಮ ಪೈಪೋಟಿಯಿಂದ ಕೂಡಿದ ಪ್ರಥಮಾರ್ಧದಲ್ಲಿ ಯುಪಿ ಯೋಧಾಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 21-19 ಅಂತರದಲ್ಲಿ ಮುನ್ನಡೆಯಿತು. ಪ್ರದೀಪ್ ನರ್ವಾಲ್ (8) ಹಾಗೂ ಸುರಿಂದರ್ ಗಿಲ್ (5) ರೈಡಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ನೆರವಾದರು. ಪ್ರದೀಪ್ ನರ್ವಾಲ್ ಸೂಪರ್ ರೈಡ್ ಸಾಧನೆ ಪಂದ್ಯದ ಆಕರ್ಷಣೆಯಾಗಿತ್ತು.
![Pro Kabaddi: ಜೈಂಟ್ಸ್ ಗೆ ಜಯ, ಅಂಕಪಟ್ಟಿಯಲ್ಲಿ ಬಡ್ತಿ 3 GujaratGiants UpYoddhas 2](http://sportskarnataka.com/wp-content/uploads/2022/10/GujaratGiants-UpYoddhas-2-1024x1024.jpg)
ಗುಜರಾತ್ ಜೈಂಟ್ಸ್ ಪರ ನಾಯಕ ಚಂದ್ರನ್ ರಂಜಿತ್ 13 ಅಂಕಗಳನ್ನು ಗಳಿಸಿ ಪ್ರಥಮಾರ್ಧದಲ್ಲೇ ಸೂಪರ್ ಟೆನ್ ಸಾಧನೆ ಮಾಡಿದರು. ರಂಜಿತ್ ಅವರ ಒಟ್ಟು ಅಂಕದಲ್ಲಿ ಸೂಪರ್ ರೈಡ್ ಸಾಧನೆಯೂ ಸೇರಿತ್ತು. ಸಮಬಲದ ಹೋರಾಟ ಕಂಡು ಬಂದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಆಲೌಟ್ ಆದದ್ದು ಅಂಕದಲ್ಲಿನ ಅಂತರಕ್ಕೆ ಕಾರಣವಾಯಿತು.
![Pro Kabaddi: ಜೈಂಟ್ಸ್ ಗೆ ಜಯ, ಅಂಕಪಟ್ಟಿಯಲ್ಲಿ ಬಡ್ತಿ 4 GujaratGiants UpYoddhas 1](http://sportskarnataka.com/wp-content/uploads/2022/10/GujaratGiants-UpYoddhas-1-1024x1024.jpg)
ದ್ವಿತಿಯಾರ್ಧದ ಆರಂಭದಲ್ಲೇ ಗುಜರಾತ್ ಜೈಂಟ್ಸ್ ಎದುರಾಳಿಯನ್ನು ಆಲೌಟ್ ಮಾಡುವ ಮೂಲಕ 25-23 ಅಂಕಗಳಲ್ಲಿ ಮುನ್ನಡೆ ಕಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಂತರದ ಐದು ನಿಮಿಷಗಳ ಅವಧಿಯಲ್ಲಿ ಯುಪಿ ಯೋಧಾಸ್ ಎರಡನೇ ಬಾರಿಗೆ ಆಲೌಟ್ ಆಗುವವ ಮೂಲಕ ಗುಜರಾತ್ ಜೈಂಟ್ಸ್ 37-29 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.
ಪಂದ್ಯ ಮುಗಿಯಲು 4 ನಿಮಿಷ ಬಾಕಿ ಇರುವಾಗ ಯುಪಿ ಯೋಧಾಸ್ ಮತ್ತೊಮ್ಮೆ ಆಲೌಟ್ ಆಗುವ ಮೂಲಕ ಗುಜರಾತ್ ಜೈಂಟ್ಸ್ 49-38 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಜಯದತ್ತ ಹೆಜ್ಜೆ ಹಾಕಿತು.
Pro Kabaddi, Gujarat Giants, U.P. Yoddhas