ನವೀನ್ ಸೂಪರ್ ರೈಡಿಂಗ್, ಗೆದ್ದ ದಬಾಂಗ್
ನಾಯಕ ನವೀನ್ ಕುಮಾರ್ ಅವರ ಸೂಪರ್ ಅದ್ಭುತ ರೈಡಿಂಗ್ ಸಾಧನೆಯ ಮೂಲಕ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ತಂಡ ಗುಜರಾತ್ ಜಯಂಟ್ಸ್ ವಿರುದ್ಧ 53-33 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.
ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಿನದ ಎರಡನೇ ಪಂದ್ಯದಲ್ಲಿ ನಾಯಕ ನವೀನ್ ಕುಮಾರ್ ಕೊನೆಯ ಕ್ಷಣದಲ್ಲಿ ಮಿಂಚಿನ ರೈಡಿಂಗ್ ಮಾಡುವ ಮೂಲಕ ದಬಾಂಗ್ ಡೆಲ್ಲಿ ತಂಡ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 21-17 ಅಂತರದಲ್ಲಿ ಮುನ್ನಡೆ ಕಂಡುಕೊಂಡಿದೆ. ನವೀನ್ ಕುಮಾರ್ ಮೊದಲ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಅವರ ಆಟದ ಮೇಲೆ ಎದ್ದು ಕಂಡಿತು. ಆರಂಭದ 8 ರೈಡ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 3 ಅಂಕಗಳು. ನಂತರ ನೈಜ ಪ್ರದರ್ಶನ ತೋರಿ 7 ಅಂಕಗಳನ್ನು ಸಂಪಾದಿಸಿದರು. ಜೊತೆಯಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಮಂಜೀತ್ 4 ಅಂಕಗಳ ಮೂಲಕ ತಂಡದ ಮುನ್ನಡೆಗೆ ನೆರವಾದರು. ಟ್ಯಾಕಲ್ ವಿಭಾಗದಲ್ಲಿ ಕಿಶನ್ ಹಾಗೂ ವಿಶಾಲ್ ತಲಾ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.
ಗುಜರಾತ್ ಜಯಂಟ್ಸ್ ಆರಂಭದಿಂದಲೂ ದಿಟ್ಟ ಹೋರಾಟ ನೀಡುತ್ತ ಸಮಬಲ ಸಾಧಿಸಿತ್ತು. ರಾಕೇಶ್ ಸೂಪರ್ 10 ಮೂಲಕ ತಂಡ ಉತ್ತಮ ಸವಾಲು ನೀಡುವಲ್ಲಿ ನೆರವಾದರು. ತಂಡದ ಡಿಫೆನ್ಸ್ ವಿಭಾಗ ನಿರೀಕ್ಷಿತ ಪ್ರಮಾಣದಲ್ಲಿ ಅಂಕ ಗಳಿಸದಿರುವುದು ಗುಜರಾತ್‌ನ ಮೊದಲಾರ್ಧದ ಹಿನ್ನಡೆಗೆ ಕಾರಣವಾಯಿತು.
ದಬಾಂಗ್ ಡೆಲ್ಲಿ ತಂಡದ ನಾಯಕ ನವೀನ್ ಎಕ್ಸ್‌ಪ್ರೆಸ್ 15 ರೈಡಿಂಗ್ ಅಂಕಗಳನ್ನು ಗಳಿಸಿ ಪ್ರೋ ಕಬಡ್ಡಿ ಲೀಗ್ ಇತಿಹಾಸಲ್ಲಿ 44ನೇ ಬಾರಿಗೆ ಸೂಪರ್ 10 ಸಾಧನೆ ಮಾಡಿದರು. ತಂಡದ ಪರ ಮಂಜಿತ್ ಕೂಡ 10 ರೈಡಿಂಗ್ ಅಂಕಗಳನ್ನು ಗಳಿಸಿ ಸೂಪರ್ 10 ಸಾಧನೆ ಮಾಡಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಟ್ಯಾಕಲ್‌ನಲ್ಲಿ ಕ್ರಿಷನ್ 7 ಅಂಕಗಳನ್ನು ಗಳಿಸಿ ಬೃಹತ್ ಜಯಕ್ಕೆ ನೆರವಾದರು.
ಗುಜರಾತ್ ಜೈಂಟ್ಸ್ ಪರ ರಾಕೇಶ್ ಒಂಟಿಯಾಗಿ ಹೋರಾಟ ನಡೆಸಿದ ರೀತಿಯಲ್ಲಿ 15 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
Pro Kabaddi, Dabang Delhi KC, Gujarat Giants