Pro Kabaddi: ದೇಶದಲ್ಲಿ ಆರಂಭವಾಗಿದೆ ದೇಶಿ ಕ್ರೀಡೆಯ 9ನೇ ಆವೃತ್ತಿ, ಬೆಂಗಳೂರಿನಲ್ಲಿ ಉದ್ಘಾಟನೆ
ವಿವೋ ಪ್ರೋ ಕಬಡ್ಡಿ ಲೀಗ್‌ನ ಸಂಘಟಕರಾದ ಮಷಾಲ್ ಸ್ಪೋರ್ಟ್ಸ್ ಅಕ್ಟೋಬರ್ 6 ಗುರುವಾರದಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಗೆ ಚಾಲನೆ ನೀಡಿದರು.
ಎಲ್ಲ 12 ತಂಡಗಳ ತಲಾ ಒಬ್ಬೊಬ್ಬ ಆಟಗಾರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು ಜೊತೆಯಲ್ಲಿ ಮಷಾಲ್ ಸ್ಪೋರ್ಟ್ಸ್‌ನ ಸಿಇಒ, ಸ್ಪೋರ್ಟ್ಸ್ ಲೀಗ್, ಡಿಸ್ನಿ ಸ್ಟಾರ್ ಮತ್ತು ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಕೂಡ ಹಾಜರಿದ್ದರು.
ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ತಂಡವು ಎರಡನೇ ಋತುವಿನ ಚಾಂಪಿಯನ್ ಯು ಮುಂಬಾ ವಿರುದ್ಧ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರದಂದು ನಡೆಯುವ ಮೊದಲ ಪಂದ್ಯದಲ್ಲಿ ಎದುರಾಗಲಿವೆ. ಈ ಋತುವಿನಲ್ಲಿ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಮೂರು ವರ್ಷಗಳ ನಂತರ ಕಬಡ್ಡಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಪಡೆಯುವುದು ವಿಶೇಷ.
“ನಾವು ಹಾಲಿ ಚಾಂಪಿಯನ್ನರು ಆದ್ದರಿಂದ ಈ ಋತುವಿನಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆಂಬ ಆತ್ಮವಿಶ್ವಾಸವಿದೆ. ಈ ಹಿಂದೆ ನಾನು ತಂಡದಲ್ಲಿ ಒಬ್ಬ ಆಟಗಾರನಾಗಿ ಆಡುತ್ತಿದ್ದೆ. ಈಗ ನಾಯಕನಾಗಿ ತಂಡದ ಪರ ಆಡುತ್ತಿರುವೆ. ಉತ್ತಮ ಪ್ರದರ್ಶನದೊಂದಿಗೆ ತಂಡವನ್ನು ಮುನ್ನಡೆಸಬೇಕಿದೆ. ಜವಾಬ್ದಾರಿಯಿಂದಾಗಿ ಒಬ್ಬ ವ್ಯಕ್ತಿ ಬಲಿಷ್ಠನಾಗುತ್ತಾನೆ, ಆದ್ದರಿಂದ ನನ್ನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಈ ಋತುವಿನಲ್ಲಿ ಉತ್ತಮವಾಗಿ ಆಡುವೆ,” ಎಂದು ದಬಾಂಗ್ ಡೆಲ್ಲಿ ಕೆಸಿ ತಂಡದ ನಾಯಕ ನವೀನ್ ಕುಮಾರ್ ತಿಳಿಸಿದ್ದಾರೆ.

ಇದೇ ವೇಳೆ ತವರಿನ ತಂಡ (ಬೆಂಗಳೂರು ಬುಲ್ಸ್)ದ ಮೊದಲ ಹಂತದ ನಾಯಕ ಮಹೇಂದರ್ ಸಿಂಗ್, ಸ್ಟಾರ್ ರೈಡರ್ ವಿಕಾಶ್ ಕಂಡೋಲ ಮಾತನಾಡಿ, “ವಿಕಾಶ್ ಒಬ್ಬ ಉತ್ತಮ ರೈಡರ್ ಮತ್ತ ಅವರು ಕಳೆದ ಋತುವಿನ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಅವರಿಂದ ನಾವು ಬಹಳಷ್ಟು ನಿರೀಕ್ಷೆಯಲ್ಲಿದ್ದೇವೆ. ಈ ಋತುವಿನಲ್ಲೂ ಅವರು ಉತ್ತಮವಾಗಿ ಆಡಿ ಹೆಚ್ಚಿನ ಪಂದ್ಯಗಳಲ್ಲಿ ಜಯ ಗಳಿಸಲು ನೆರವಾಗುತ್ತಾರೆಂದು ನಾನು ನಂಬಿದ್ದೇನೆ,” ಎಂದರು.
ದಕ್ಷಿಣದ ಡರ್ಬಿ ಎನಿಸಿರುವ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ದಿನದ 2ನೇ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಯು.ಪಿ. ಯೋಧಾಸ್ ವಿರುದ್ಧ ಹೋರಾಡಲಿದೆ.
ಕಬಡ್ಡಿ ಅಭಿಮಾನಿಗಳು ಬುಕ್ ಮೈಶೋ (BookMyShow) ನಲ್ಲಿ 9ನೇ ಋತುವಿನ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು.
Pro Kabaddi, 9th Edition, Bangalore