Prithvi Shaw – ಪೃಥ್ವಿ ಶಾ ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಯಾಕೆ ಇಲ್ಲ…?
ಪೃಥ್ವಿ ಶಾ… ಪ್ರಖರ ಸೂರ್ಯ ನಂತೆ ಟೀಮ್ ಇಂಡಿಯಾದಲ್ಲಿ ಪ್ರಜ್ವಲಿಸಿದ್ದ ಯುವ ಆಟಗಾರ. ಆದ್ರೆ ಗಾಯ, ಉದ್ದೀಪನಾ ಔಷಧ, ಕಳಪೆ ಫಾರ್ಮ್, ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ ಇದೀಗ ಟೀಮ್ ಇಂಡಿಯಾಗೆ ಬೇಡವಾದ ಆಟಗಾರನಾಗಿದ್ದಾರೆ.
ಹೌದು, ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿಯನ್ನು ನೋಡಿದಾಗ ರೋಮಾಂಚನವಾಗುತ್ತದೆ. ನೋಡಲು ವಾಮನಮೂರ್ತಿಯಾದ್ರೂ ಶಕ್ತಿಮಾನ್ ನಂತೆ ಬ್ಯಾಟ್ ಬೀಸುವ ಅದ್ಭುತ ಆಟಗಾರ. ಬೌಲರ್ ಯಾರೇ ಇರಲಿ, ಬ್ಯಾಟಿಂಗ್ ತಾಂತ್ರಿಕತೆಯಿಂದಲೇ ಹೊಡಿಬಡಿ ಆಟವನ್ನಾಡುವ ಪೃಥ್ವಿ ಶಾ ಎದುರಾಳಿ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿರುತ್ತಾರೆ. ಸಚಿನ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ ಮತ್ತು ಸೆಹ್ವಾಗ್ ಆಟದ ಶೈಲಿಯನ್ನು ಮೈಗೂಡಿಸಿಕೊಂಡಿರುವ ಪೃಥ್ವಿ ಶಾ ಟೀಮ್ ಇಂಡಿಯಾದಲ್ಲಿ ಇರುತ್ತಿದ್ರೆ ಇವತ್ತು ನಾಯಕತ್ವದ ಸಮಸ್ಯೆನೇ ಇರುತ್ತಿರಲಿಲ್ಲ. ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾ ತಂಡವನ್ನು ಮುನ್ನಡೆಸುವ ಅವಕಾಶ ಪೃಥ್ವಿ ಶಾಗೆ ಇತ್ತು.
ಆದ್ರೆ ಪೃಥ್ವಿ ಶಾ ಅವರ ಅದೃಷ್ಟ ವಿರಲಿಲ್ಲ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದ ಪೃಥ್ವಿ ಶಾ ಅಷ್ಟೇ ಬೇಗ ಟೀಮ್ ಇಂಡಿಯಾದಿಂದ ಹೊರನಡೆದಿದ್ದರು. ಮೊದಲು ಕಾಡಿದ್ದ ಗಾಯ, ನಂತರ ಉದ್ದೀಪನಾ ದ್ರವ್ಯ ಸೇವನೆಯ ಆರೋಪ, ಕಳಪೆ ಫಾರ್ಮ್‍ನಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ.
ಕಳೆದ ಆಸ್ಟ್ರೇಲಿಯಾ ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ್ರೂ ಕಳಪೆ ಫಾರ್ಮ್‍ನಿಂದಾಗಿ ಹೊರನಡೆಯಬೇಕಾಯ್ತು. ಆನಂತರ ವಿಜಯ ಹಜಾರೆ, ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಟೂರ್ನಿಯಲ್ಲಿ ದಾಖಲೆಯ ರನ್ ಮಳೆ ಸುರಿಸಿದ್ರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಐಪಿಎಲ್ ನಲ್ಲಿ ಸ್ಪೋಟಕ ಆಟವನ್ನಾಡಿದ್ರೂ ಸ್ಥಿರ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಪೃಥ್ವಿ ಶಾ ಅವರು ಅವಕಾಶ ವಂಚಿತರಾಗುತ್ತಿದ್ದಾರೆ.
ಇದೀಗ ಪೃಥ್ವಿ ಶಾ ಬೆಂಬಲಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾಕ್ ್ ನಿಂತಿದ್ದಾರೆ. ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿಗೆ ಮೈಕೆಲ್ ಕ್ಲಾರ್ಕ್ ಫಿದಾ ಆಗಿದ್ದಾರೆ. ಅಲ್ಲದೆ ಪೃಥ್ವಿ ಶಾ ಅವರನ್ನು ಸೆಹ್ವಾಗ್ ಗೆ ಹೋಲಿಕೆ ಮಾಡಿದ್ದಾರೆ.
ಪೃಥ್ವಿ ಶಾ ಬ್ರಾಂಡ್ ಆಫ್ ಕ್ರಿಕೆಟ್. ಅದ್ಭುತ ಆಟಗಾರ. ಪೃಥ್ವಿ ಶಾ ಬ್ಯಾಟಿಂಗ್ ವೈಖರಿಯನ್ನು ನೋಡಿದಾಗ ಸೆಹ್ವಾಗ್ ಆಟ ನೆನಪಾಗುತ್ತದೆ. ಸ್ಪೋಟಕವಾಗಿ ಆಡುವ ಸೆಹ್ವಾಗ್ ಜೀನಿಯಸ್ ಆಟಗಾರ. ಅದೇ ಹಾದಿಯಲ್ಲಿದ್ದಾರೆ ಪೃಥ್ವಿ ಶಾ ಎಂದು ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.
ಅಂದ ಹಾಗೇ ಆಸ್ಟ್ರೇಲಿಯಾ ಸರಣಿಯ ಒಂದು ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ ಅಂತ ತಂಡದಿಂದ ಹೊರಗಿಡುವುದು ಸರಿಯಲ್ಲ. ಹಾಗೇ ನೋಡಿದ್ರೆ ಶುಬ್ಮನ್ ಗಿಲ್ ಗೆ ಸಾಲು ಸಾಲು ಅವಕಾಶಗಳನ್ನು ನೀಡಲಾಗಿತ್ತು. ಅಂತಹ ಅವಕಾಶಗಳು ಪೃಥ್ವಿ ಶಾಗೆ ಸಿಗಲಿಲ್ಲ.
ಒಟ್ಟಿನಲ್ಲಿ ಪೃಥ್ವಿ ಶಾ ಅವರಿಗೆ ಈ ಬಾರಿಯ ರಣಜಿ ಮತ್ತು ಐಪಿಎಲ್ ಟೂರ್ನಿ ಅಗ್ನಿಪರೀಕ್ಷೆಯಾಗಲಿದೆ. ಪೃಥ್ವಿ ಶಾ ರನ್ ಮಳೆ ಸುರಿಸಿದ್ರೆ ಪಕ್ಕಾ ಟೀಮ್ ಇಂಡಿಯಾದೊಳಗೆ ಎಂಟ್ರಿ ಪಡೆದುಕೊಳ್ಳುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.