ಪ್ರೊ ಕಬಡ್ಡಿ ಲೀಗ್ ನ 120ನೇ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ತಂಡ ಆತಿಥೇಯ ಬೆಂಗಳೂರು ತಂಡವನ್ನು ಮಣಿಸಿ, ಟೂರ್ನಿಯಲ್ಲಿ 14ನೇ ಜಯ ದಾಖಲಿಸಿದೆ.
ಆಡಿದ 19 ಪಂದ್ಯಗಳಲ್ಲಿ 14 ಜಯ, 4 ಸೋಲು, 1 ಡ್ರಾ ಸಾಧಿಸಿದ್ದು 75 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಾಟ್ನಾ ಪೈರೇಟ್ಸ್ ಗಟ್ಟಿಗೊಳಿಸಿದೆ. ಇನ್ನು 20ನೇ ಪಂದ್ಯವನ್ನು ಆಡಿದ ಬೆಂಗಳೂರು ಆಡಿದ 20 ಪಂದ್ಯಗಳಲ್ಲಿ 10 ಜಯ, 8 ಸೋಲು, 2 ಡ್ರಾ ಸಾಧಿಸಿದ್ದು 60 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿ ಗಮನ ಸೆಳೆಯಿತು. ಸ್ಟಾರ್ ರೈಡರ್ ಮನು ಗೋಯತ್ 9, ರೈಟ್ ಕಾರ್ನರ್ ಡಿಫೆಂಡರ್ ಸುನಿಲ್ ಹಾಗೂ ಮೊಹಮ್ಮದ್ರೇಜಾ ತಲಾ ಆರು ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಪವನ್ ಸೆಹ್ರಾವತ್ 7, ಭರತ್ ಹಾಗೂ ಸೌರಭ್ ನಡಾಲ್ ತಲಾ 4 ಅಂಕ ಸೇರಿಸಿದರು.
ಆರಂಭದಲ್ಲಿ ಪಾಟ್ನಾ ಕಾಯ್ದುಕೊಂಡ ಮುನ್ನಡೆಯನ್ನು ಪಂದ್ಯದ ಯಾವುದೇ ಹಂತದಲ್ಲೂ ಬಿಟ್ಟು ಕೊಡಲಿಲ್ಲ. ಅಂತಿಮವಾಗಿ ಪಾಟ್ನಾ 36-34 ರಿಂದ ಜಯ ಸಾಧಿಸಿತು. ಒಟ್ಟಾರೆ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಒಟ್ಟಾರೆ ಪಂದ್ಯದಲ್ಲಿ ಪಾಟ್ನಾ 40 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 14 ರೈಡ್ ಪಾಯಿಂಟ್ ಗಳಿಸಿದರೆ, ಇಷ್ಟೇ ದಾಳಿಯಲ್ಲಿ ಬೆಂಗಳೂರು 12 ಅಂಕ ಕಲೆ ಹಾಕಿತು. ಅಲ್ಲದೆ ಇದರಲ್ಲಿ ಒಂದು ಸೂಪರ್ ರೈಡ್ ಸಹ ಸೇರಿದೆ. ಇನ್ನು ಎದುರಾಳಿ ಆಟಗಾರರನ್ನು ಹಿಡಿಯುವ 31 ಪ್ರಯತ್ನದಲ್ಲಿ ಪಾಟ್ನಾ 16 ರಲ್ಲಿ ಯಶ ಕಂಡಿತು. ಇನ್ನು ಬೆಂಗಳೂರು 11 ಬಾರಿ ಎದುರಾಳಿ ಆಟಗಾರರನ್ನು ಕಟ್ಟಿಹಾಕಲುವಲ್ಲಿ ಸಫಲವಾಯಿತು.