ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿವೆ. 15ನೇ ಆವೃತ್ತಿಯ ಆರಂಭದಲ್ಲಿ ಟಾಸ್ ಗೆದ್ದ ತಂಡಗಳು ಬಾಸ್ ಆಗುತ್ತಿದ್ದವು. ಟಾಸ್ ಗೆದ್ದವರ ಆಯ್ಕೆ ಎರಡು ಮಾತಿಲ್ಲದೆ ಫೀಲ್ಡಿಂಗ್ ಆಗಿರುತ್ತಿತ್ತು. ಆದರೆ ಈಗ ಟ್ರೆಂಡ್ ಬದಲಾಗುತ್ತಿದೆ. ಟಾಸ್ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿಲ್ಲ.
ಈ ಮಧ್ಯೆ ಐಪಿಎಲ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. IPL 2022 ಇದೇ ಮೊದಲ ಬಾರಿಗೆ ಸತತ 5 ಪಂದ್ಯಗಳಲ್ಲಿ ತಂಡಗಳು 50ಕ್ಕಿಂತಲೂ ಹೆಚ್ಚು ರನ್ ಅಂತರದಲ್ಲಿ ಗೆಲುವು ಸಾಧಿಸಿವೆ. ಈ ಮೊದಲು ಐಪಿಎಲ್‌ನಲ್ಲಿ ಸತತ 2 ಪಂದ್ಯಗಳಿಗಿಂತ ಹೆಚ್ಚು ಈ ರೀತಿ ಆಗಿರಲಿಲ್ಲ. ಮಂಗಳವಾರ ಲಖನೌ ಸೂಪರ್‌ಜೈಂಟ್ ವಿರುದ್ಧ ಗುಜರಾತ್ ಟೈಟಾನ್ಸ್ 62 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಸತತ 5 ಪಂದ್ಯಗಳು ಏಕಪಕ್ಷೀಯವಾಗಿಯೇ ಸಾಗಿವೆ. ಇದೇ ಮೊದಲ ಬಾರಿಗೆ ತಂಡಗಳು ಸತತ 5 ಪಂದ್ಯಗಳಲ್ಲಿ 50+ ರನ್ ಅಂತರದ ಗೆಲುವು ಸಾಧಿಸಿವೆ.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 52 ರನ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 91 ರನ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 67 ರನ್, ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 75 ರನ್‌ಗಳಿಂದ ಗೆದ್ದಿದ್ದವು. 5 ಪಂದ್ಯಗಳ ಪೈಕಿ 3ರಲ್ಲಿ ಟಾಸ್ ಗೆದ್ದ ತಂಡಗಳು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ್ದವು.
ಐಪಿಎಲ್ನ ಈ ಹೊಸ ಟ್ರೆಂಡ್ ಪಿಚ್ ನಿಧಾನಗತಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವ ಟ್ರೆಂಡ್ ಆರಂಭವಾದರೂ ಅಚ್ಚರಿ ಇಲ್ಲ.