ಟೆಸ್ಟ್ ಪಂದ್ಯಗಳಲ್ಲಿ ಮತ್ತೆ ಆಡುತ್ತೇನೆ ಅಂತ ಅಂದುಕೊಂಡಿರಲಿಲ್ಲ – ಕೆ.ಎಲ್. ರಾಹುಲ್
ನಾನು ಮತ್ತೆ ಟೆಸ್ಟ್ ಪಂದ್ಯ ಆಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಇದೀಗ ಉಪನಾಯಕನ ಜವಾಬ್ದಾರಿ ಸಿಕ್ಕಿದೆ . ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಕೆ.ಎಲ್. ರಾಹುಲ್ ಹೇಳಿದ್ದಾರೆ.
2014ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಕೆ.ಎಲ್. ರಾಹುಲ್ ಸ್ಥಿರ ಪ್ರದರ್ಶನ ನೀಡದೇ ತಂಡಕ್ಕೆ ಬಂದು ಹೋಗುವ ಆತಿಥಿಯಂತಾಗಿದ್ದರು. ಆದ್ರೆ 2018ರ ನಂತರ ಕೆ.ಎಲ್. ರಾಹುಲ್ ಫಾರ್ಮ್ ಕಂಡುಕೊಂಡಿದ್ರೂ ತಂಡದ ಖಾಯಂ ಆಟಗಾರನಾಗಿ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದರು.
ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನ ಜವಾಬ್ದಾರಿಯೂ ಸಿಕ್ಕಿದೆ. ಈ ಅವಕಾಶವನ್ನು ರಾಹುಲ್ ಸರಿಯಾಗಿ ಬಳಸಿಕೊಳ್ಳಬೇಕಿದೆ.
ಹಾಗೇ ನೋಡಿದ್ರೆ ಈ ಹಿಂದೆ ಕೆ.ಎಲ್. ರಾಹುಲ್ ಅವರನ್ನು ಟೆಸ್ಟ್ ಸ್ಪೆಷಲಿಸ್ಟ್ ಆಂತ ಪರಿಗಣಿಸಲಾಗಿತ್ತು. ಆದ್ರೆ ಆಡುವ 11ರ ಬಳಗದಲ್ಲಿ ರಾಹುಲ್ ಅವಕಾಶ ಸರಿಯಾಗಿ ಸಿಕ್ಕಿರಲಿಲ್ಲ. ಇನ್ನೊಂದೆಡೆ ಅವಕಾಶ ಸಿಕ್ಕಿದ್ರೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೆಟ್ಟ ಫಾರ್ಮ್, ಗಾಯದ ಸಮಸ್ಯೆಯೂ ಕೆಲವು ಬಾರಿ ಕಾಡಿದ್ದು ಇದೆ.
ಆದ್ರೆ ಕೆ.ಎಲ್. ರಾಹುಲ್ ಕಳೆದ ಆರೇಳು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ. ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ನಿಧಾನ ಗತಿಯ ಬ್ಯಾಟಿಂಗ್ ಬದಲು ವೇಗವಾಗಿ ಬ್ಯಾಟ್ ಬೀಸುವ ಕಲೆಯನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಕೆ.ಎಲ್. ರಾಹುಲ್ ಸೈ ಎನಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ 40 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆ.ಎಲ್. ರಾಹುಲ್ 34ರ ಸರಾಸರಿಯಲ್ಲಿ 2321 ರನ್ ಗಳಿಸಿದ್ದಾರೆ. ಇದ್ರಲ್ಲಿ ಆರು ಶತಕ ಮತ್ತು 12 ಅರ್ಧಶತಕಗಳು ಸೇರಿಕೊಂಡಿವೆ. kl rahul team india sports karnataka
ಆರೇಳು ತಿಂಗಳ ಹಿಂದೆ ನಾನು ಮತ್ತೆ ಟೆಸ್ಟ್ ಪಂದ್ಯ ಆಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದ್ರೆ ಎಲ್ಲವೂ ಬದಲಾಗಿ ಹೋಯ್ತು. ನನ್ನ ಬ್ಯಾಟಿಂಗ್ ನಲ್ಲೂ ಸುಧಾರಣೆಯಾಗಿದೆ. ಉಪನಾಯಕನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ವಿಶ್ವಾಸವನ್ನು ಕೆ.ಎಲ್. ರಾಹುಲ್ ವ್ಯಕ್ತಪಡಿಸಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ತಾಳ್ಮೆಯ ಆಟವನ್ನು ಆಡಬೇಕಿದೆ. ದಕ್ಷಿಣ ಆಫ್ರಿಕಾದ ವೇಗದ ಪಿಚ್ ಗಳಲ್ಲಿ ಆಡುವುದು ಬಲು ದೊಡ್ಡ ಸವಾಲು. ತಾಳ್ಮೆ ಬಹುಮುಖ್ಯ. ಜೊತೆಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೂ ಹೆಚ್ಚು ಪರಿಣಾಮಕಾರಿಯಾಗಲಿದೆ. ರಾಹುಲ್ ದ್ರಾವಿಡ್ ಅವರು ದಕ್ಷಿಣ ಆಫ್ರಿಕಾ ನೆಲದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ರಾಹುಲ್ ದ್ರಾವಿಡ್ ಡ್ರೆಸಿಂಗ್ ರೂಮ್ ನಲ್ಲಿರುವುದು ಪ್ರಯೋಜನವಾಗಲಿದೆ ಎಂದು ಕೆ.ಎಲ್. ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.