ಅಜಿಂಕ್ಯಾ ರಹಾನೆ ಕಮ್ ಬ್ಯಾಂಕ್ ಮಾಡ್ತಾರೆ – ಗುರು ಪ್ರವೀಣ್ ಅಮ್ರೆ ವಿಶ್ವಾಸ
ಪ್ರವೀಣ್ ಅಮ್ರೆ… ಈ ಹೆಸರು ಭಾರತೀಯ ಕ್ರಿಕೆಟ್ ನಲ್ಲಿ ಚಿರಪರಿಚಿತ. ಆಡಿದ್ದು 11 ಟೆಸ್ಟ್ ಪಂದ್ಯ ಹಾಗು 37 ಏಕದಿನ ಪಂದ್ಯಗಳನ್ನು ಮಾತ್ರ. ಆದ್ರೆ ಹೊಡಿಬಡಿ ಆಟದ ಮೂಲಕವೇ ಗಮನ ಸೆಳೆದಿರುವ ಪ್ರವೀಣ್ ಅಮ್ರೆ ಅವರು ಇದೀಗ ಕ್ರಿಕೆಟ್ ಗುರು ಆಗಿ ಕಾಯಕ ಮಾಡುತ್ತಿದ್ದಾರೆ.
ಹೌದು, ಅದು 1992ರ ಡರ್ಬಾನ್ ಟೆಸ್ಟ್ ಪಂದ್ಯ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವೇಗದ ದಾಳಿಯ ಎದುರು ಪ್ರವೀಣ್ ಅಮ್ರೆ ಅವರು ಸಿಡಿಸಿದ್ದು ಅಮೋಘ 103 ರನ್. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕದ ಸಂಭ್ರಮವನ್ನು ಆಚರಿಸಿದ್ದರು.
ಆದ್ರೆ ಅದಕ್ಕೂ ಮುನ್ನ ಪ್ರವೀಣ್ ಅಮ್ರೆ ಸತತ 12 ಟೆಸ್ಟ್ ಪಂದ್ಯಗಳಲ್ಲಿ 12ನೇ ಆಟಗಾರನಾಗಿದ್ದರು. ಆದ್ರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ್ರು. ಬಳಿಕ ಹಾಗೇ ತೆರೆಮರೆಗೆ ಸೇರಿಕೊಂಡ್ರು.
ಇದೀಗ ಪ್ರವೀಣ್ ಅಮ್ರೆ ಅವರು ತನ್ನ ಶಿಷ್ಯ ಅಜಿಂಕ್ಯಾ ರಹಾನೆಯವರ ಬೆನ್ನಿಗೆ ನಿಂತಿದ್ದಾರೆ.
ಅಜಿಂಕ್ಯಾ ರಹಾನೆ ಅವರು ಕಮ್ ಬ್ಯಾಕ್ ಮಾಡುತ್ತಾರೆ ಅನ್ನೋ ವಿಶ್ವಾಸ ನನಗಿದೆ. ರಹಾನೆ ಅವರಿಗೆ ಪ್ರತಿ ಇನಿಂಗ್ಸ್ ಕೂಡ ಪ್ರಮುಖವಾದದ್ದು. ರಹಾನೆ ಅವರಿಗೆ ಯಾವ ರೀತಿ ಆಡಬೇಕು ಎಂಬುದು ಗೊತ್ತಿದೆ. ಕೆಟ್ಟ ಸಮಯ ಇದ್ದೇ ಇರುತ್ತದೆ. ಅದನ್ನು ರಹಾನೆ ಮೆಟ್ಟಿ ನಿಲ್ಲುತ್ತಾರೆ ಅನ್ನೋ ವಿಶ್ವಾಸ ನನಗಿದೆ ಎಂದು ಪ್ರವೀಣ್ ಅಮ್ರೆ ಅವರು ತನ್ನ ಶಿಷ್ಯನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಅಜಿಂಕ್ಯಾ ರಹಾನೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 12 ಶತಕ ಸೇರಿ ಸುಮಾರು 4000ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ. ಆದ್ರೆ ಕಳೆದ 12 ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ್ದು ಬರೀ 411 ರನ್. ಅದು ಕೂಡ 19.57 ಸರಾಸರಿಯಲ್ಲಿ.
ಆದ್ರೆ ವಿದೇಶಿ ನೆಲದಲ್ಲಿ ರಹಾನೆ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ತಂಡದಲ್ಲಿ ರಹಾನೆ ಸ್ಥಾನವೂ ಅಲುಗಾಡುತ್ತಿದೆ. ಹೀಗಾಗಿ ಫಾರ್ಮ್ ಕಂಡುಕೊಂಡು ರನ್ ಮಳೆಯನ್ನು ಸುರಿಸಬೇಕಿದೆ. ಟೆಸ್ಟ್ ಸ್ಪೆಷಲಿಸ್ಟ್ ಆಗಿರುವ ರಹಾನೆ ಕೆಟ್ಟ ಫಾರ್ಮ್ ನಲ್ಲಿರುವುದು ನಿಜ. ಆದ್ರೆ ರಹಾನೆ ಅವರ ಅನುಭವ ಮತ್ತು ವಿದೇಶಿ ನೆಲದಲ್ಲಿ ಯಾವ ರೀತಿ ಆಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಒಂದು ವೇಳೆ ರಹಾನೆ ಅವರ ಕೆಟ್ಟ ಫಾರ್ಮ್ ಮುಂದುವರಿದ್ರೆ ತಂಡದಿಂದ ಹೊರನಡೆಯುವುದು ಖಚಿತ. ಹೀಗಾಗಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ರಹಾನೆಗೆ ಟೆಸ್ಟಿಂಗ್ ಟೈಮ್..!