Neeraj Chopra – ಡೈಮಂಡ್ ಲೀಗ್ ನಲ್ಲಿ ಚಿನ್ನದ ನಗೆ ಬೀರಿದ ನೀರಜ್ ಚೋಪ್ರಾ
ಮೊದಲ ಎಸೆತದಲ್ಲೇ 89.08 ಮೀಟರ್ ದೂರ ಎಸೆದಿದ್ದ ನೀರಜ್ ಚೋಪ್ರಾ
ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ
2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಗಾಯದಿಂದಾಗಿ ಕಾಮನ್ ವೆಲ್ತ್ ಗೇಮ್ಸ್ ಮೀಸ್ ಮಾಡಿಕೊಂಡಿದ್ದ ಚೋಪ್ರಾ

ಭಾರತದ ಈಟಿ ಎಸೆತಗಾರ ನೀರಜ್ ಚೋಪ್ರಾ ಅವರು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಲೌಸನ್ ನಲ್ಲಿ ನಡೆದ ಡೈಮಂಡ್ ಲೀಗ್ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರು ಅಮೋಘ ಪ್ರದರ್ಶನ ನೀಡಿದ್ದಾರೆ. ಮೊದಲ ಪ್ರಯತ್ನದಲ್ಲೇ 89.08 ಮೀಟರ್ ದೂರ ಎಸೆದು ಚಿನ್ನದ ನಗೆ ಬೀರಿದ್ದಾರೆ. ಈ ಮೂಲಕ ನೀರಜ್ ಚೋಪ್ರಾ ಅವರು, 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್‍ಗೆ ನೇರ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಅಲ್ಲದೆ ಸೆಪ್ಟಂಬರ್ 7 ರಂದು ನಡೆಯಲಿರುವ ಝೂರಿಚ್ ಫೈನಲ್ ನಲ್ಲೂ ಸ್ಪರ್ಧೆ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಇತ್ತೀಚೆಗೆ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಈ ವೇಳೆ ಗಾಯಗೊಂಡಿದ್ದ ನೀರಜ್ ಚೋಪ್ರಾ ಅವರು ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಅನ್ನು ಮಿಸ್ ಮಾಡಿಕೊಂಡಿದ್ದರು. 24ರ ಹರೆಯದ ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ನಗೆ ಬೀರಿದ್ದರು.
ಈ ಹಿಂದೆ ಡೈಮಂಡ್ ಲೀಗ್ ನಲ್ಲಿ ಭಾರತದ ವಿಕಾಸ್ ಗೌಡ ಅವರು ತಲಾ ಎರಡು ಬಾರಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದರು. ವಿಕಾಸ್ ಗೌಡ ಅವರು ಡಿಸ್ಕಸ್ ಥ್ರೋ ನಲ್ಲಿ ಈ ಸಾಧನೆ ಮಾಡಿದ್ದರು. 2012ರ ನ್ಯೂಯಾರ್ಕ್ ಮತ್ತು 2014ರ ದೋಹಾ ಡೈಮಂಡ್ ಲೀಗ್ ನಲ್ಲಿ ವಿಕಾಸ್ ಗೌಡ ಬೆಳ್ಳಿ ಪದಕ ಹಾಗೂ 2015ರಲ್ಲಿ ಶಾಂಘೈ ಮತ್ತು ಇಯುಗೇನ್ ಡೈಮಂಡ್ ಲೀಗ್ ನಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.