Asia cup 2022- Virat Kohli – ಒಂದು ತಿಂಗಳು ಬ್ಯಾಟ್ ಟಚ್ ಮಾಡಿಲ್ಲ –

ವಿರಾಟ್ ಕೊಹ್ಲಿ ಈಗ ಮತ್ತೆ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಹಣಾಹಣಿ ನಡೆಸಲಿವೆ. ಆಗಸ್ಟ್ 28ರಂದು ನಡೆಯಲಿರುವ ಈ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ಮೇಲೆಯೂ ಕ್ರಿಕೆಟ್ ಜಗತ್ತು ಕಣ್ಣಿಟ್ಟಿದೆ.
ಹೌದು, ವಿರಾಟ್ ಕೊಹ್ಲಿ ಸುದೀರ್ಘ ವಿಶ್ರಾಂತಿಯ ಬಳಿಕ ಮತ್ತೆ ಟೀಮ್ ಇಂಡಿಯಾದಲ್ಲಿ ಆಡುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸರಣಿಗೆ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು.
ಇದೀಗ ವಿಶ್ರಾಂತಿಯ ಬಳಿಕ ವಿರಾಟ್ ಕೊಹ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ತಾನು ಅನುಭವಿಸಿದ್ದ ಗೊಂದಲ, ಮಾನಸಿಕ ಕಿರಿಕಿರಿ ಮತ್ತು ಸವಾಲುಗಳನ್ನು ಯಾವ ರೀತಿ ಹಿಮ್ಮೆಟಿಸಲು ಸಾಧ್ಯವಾಯ್ತು ಎಂಬುದರ ಬಗ್ಗೆ ಮುಕ್ತವಾಗಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅಂದ ತಕ್ಷಣ ನೆನಪಾಗೋದು ಅವರ ಒರಟು ಮುಖ, ಆಕ್ರಮಣಕಾರಿ ಪ್ರವೃತ್ತಿಯ ಆಟ. ಹೌದು, ವಿರಾಟ್ ಕೊಹ್ಲಿ ಆಟಗಾರನಾಗಿ, ನಾಯಕನಾಗಿ ಸದಾ ಆಕ್ರಮಣಕಾರಿ ಪ್ರವೃತ್ತಿಯಿಂದಲೇ ಮೈದಾನದಲ್ಲಿ ಕಾಣುತ್ತಾರೆ. ಆದ್ರೆ ಕಳೆದ ಎರಡು ಮೂರು ವರ್ಷಗಳಿಂದ ವಿರಾಟ್ ಬ್ಯಾಟ್ ಸದ್ದು ಮಾಡುತ್ತಿಲ್ಲ. 2022ರಲ್ಲಿ ಐಪಿಎಲ್ ಸೇರಿ ಒಟ್ಟು 22 ಇನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ದಾಖಲಿಸಿದ್ದು ಒಂದೇ ಒಂದು ಅರ್ಧಶತಕ ಮಾತ್ರ. ಹೀಗಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ ವಿರಾಟ್ ಕೊಹ್ಲಿ.
ಹೌದು, ನಾನು ವಿಶ್ರಾಂತಿಯಲ್ಲಿದ್ದಾಗ ಸುಮಾರು ಒಂದು ತಿಂಗಳು ನಾನು ಬ್ಯಾಟ್ ಅನ್ನು ಮುಟ್ಟಲೇ ಇಲ್ಲ. ಬಹುಶಃ ಕಳೆದ ಹತ್ತು ವರ್ಷಗಳಲ್ಲಿ ಈ ರೀತಿ ಮಾಡಿದ್ದು ನಾನು ಇದೇ ಮೊದಲ ಸಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಈ ಸಮಯದಲ್ಲಿ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ದೇಹಕ್ಕೆ ಸ್ವಲ್ಪ ಬಿಡುವು ಬೇಕು ಎಂದು ಅನ್ನಿಸುತ್ತಿತ್ತು. ಹೀಗಾಗಿ ನಾನು ಆಡಬೇಕು ಅನ್ನೋ ಹಂಬಲವಿದ್ರೂ ಕೂಡ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡಬೇಕು ಎಂದು ಅನ್ನಿಸುತ್ತಿತ್ತು. ಹೀಗಾಗಿ ನಾನು ಒಂದು ತಿಂಗಳು ಬ್ಯಾಟ್ ಅನ್ನು ಮುಟ್ಟಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ

ಹಾಗೇ ನೋಡಿದ್ರೆ ನಾನು ಮಾನಸಿಕವಾಗಿ ತುಂಬಾನೇ ಗಟ್ಟಿಯಾಗಿರುತ್ತೇನೆ. ಆದ್ರೆ ಎಲ್ಲದಕ್ಕೂ ಒಂದು ಇತಿಮಿತಿ ಅಂತ ಇರುತ್ತದೆ. ಆಗ ಅದನ್ನು ಅರ್ಥಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳದಿದ್ರೆ ಅದು ಒಳ್ಳೆಯದ್ದು ಕೂಡ ಅಲ್ಲ ಅಂತಾರೆ ವಿರಾಟ್ ಕೊಹ್ಲಿ
ಈ ಅವಧಿಯಲ್ಲಿ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಹೌದು, ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಈ ವಿಚಾರವನ್ನು ಹೇಳಿಕೊಳ್ಳಲು ನನಗೆ ಏನು ನಾಚಿಕೆ ಆಗುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ತುಂಬಾನೇ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ನೆಟ್ಸ್ ನಲ್ಲೂ ಕಠಿಣ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಮಾನಸಿಕವಾಗಿ ಮತ್ತಷ್ಟು ಗಟ್ಟಿಯಾಗಿರುವ ವಿರಾಟ್ ಕೊಹ್ಲಿ ಅವರಿಗೆ ಪಾಕ್ ವಿರುದ್ಧದ ಮೊದಲ ಪಂದ್ಯವೇ ಟೆಸ್ಟಿಂಗ್ ಟೈಮ್ ಆಗಲಿದೆ.