Neeraj Chopra – ಒಲಿಂಪಿಕ್ ಮ್ಯೂಸಿಂ ಸೇರಿಕೊಂಡ ಟೊಕಿಯೋದ ಚಿನ್ನದ ಜಾವೆಲಿನ್..!

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದು ಭಾರತದ ಹೆಮ್ಮೆಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ.
ಆದಾದ ನಂತರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡ್ರೂ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಅನ್ನು ಗಾಯದ ಕಾರಣದಿಂದಾಗಿ ಮಿಸ್ ಮಾಡಿಕೊಂಡಿದ್ದರು. ಆದ್ರೂ ಇತ್ತೀಚೆಗೆ ಡೈಮಂಡ್ ಲೀಗ್ ನಲ್ಲಿ ಚಿನ್ನದ ನಗೆ ಬೀರಿ ಭಾರತೀಯ ಅಥ್ಲೆಟಿಕ್ಸ್ ರಂಗದಲ್ಲಿ ಮತ್ತೊಮ್ಮೆ ಸಂಚಲನವನ್ನು ಸೃಷ್ಟಿಸಿದ್ದರು.

ಇದೀಗ ನೀರಜ್ ಚೋಪ್ರಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದ್ರೆ ಈ ಬಾರಿ ಸುದ್ದಿಯಾಗಿದ್ದು ಚಿನ್ನದ ಪದಕ ಗೆದ್ದಿರುವುದಕ್ಕೆ ಅಲ್ಲ. ಬದಲಾಗಿ ಚಿನ್ನದ ಪದಕ ಗೆಲ್ಲುವಂತೆ ಮಾಡಿದ್ದ ಆ ಒಂದು ವಸ್ತುವಿನಿಂದ.
ಹೌದು, ಜಾವೆಲಿನ್ ಅಥವಾ ಈಟಿ. ಇದು ನೀರಜ್ ಚೋಪ್ರಾ ಅವರ ಬತ್ತಳಿಕೆಯ ಪ್ರಮುಖ ಅಸ್ತ್ರ. ಈಟಿಯನ್ನೇ ಉಸಿರು ಅಂತ ನಂಬಿಕೊಂಡಿರುವ ನೀರಜ್ ಚೋಪ್ರಾ ಈಟಿ ಅಸ್ತ್ರದ ಮೂಲಕ ವಿಶ್ವದ ಶ್ರೇಷ್ಠ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ.
ಅಂದ ಹಾಗೇ ನೀರಜ್ ಚೋಪ್ರಾ ಅವರು ಟೊಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದ ಜಾವೆಲಿನ್ /ಈಟಿಯನ್ನು ಒಲಿಂಪಿಕ್ ಮ್ಯೂಸಿಯಮ್ ಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಮ್ಯೂಸಿಯಂ ಸ್ವಿಜರ್ ಲೆಂಡ್ ನ ಲೌಸಾನ್ ನಲ್ಲಿದೆ. ಇತ್ತಿಚೆಗೆ ಲೌಸಾನ್ ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲೂ ನೀರಜ್ ಚೋಪ್ರಾ ಅವರು ಚಿನ್ನ ಗೆದ್ದುಕೊಂಡಿದ್ದರು. Abhinav Bindra
ಟೊಕಿಯೊ ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಲು ಕಾರಣವಾಗಿದ್ದ ಜಾವೆಲಿಯನ್ ಅನ್ನು ಒಲಿಂಪಿಕ್ ಮ್ಯೂಸಿಯಂ ಗೆ ನೀಡಿರುವ ವಿಷ್ಯವನ್ನು ನೀರಜ್ ಚೋಪ್ರಾ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಾನು ಇಲ್ಲಿಗೆ ಭೇಟಿ ಕೊಟ್ಟು ನನ್ನ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲಲು ಕಾರಣವಾಗಿದ್ದ ಜಾವೆಲಿನ್ ಅನ್ನು ಉಡುಗೊರೆಯಾಗಿ ನೀಡಿರುವುದು ನನಗೆ ತುಂಬಾನೇ ಖುಷಿಯನ್ನುಂಟು ಮಾಡಿದೆ. ಇದೊಂದು ನನಗೆ ಸಿಕ್ಕ ಗೌರವ ಕೂಡ ಹೌದು. ಈ ಜಾವೆಲಿನ್ ನೋಡಿದಾಗ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯ ಚಿಲುಮೆಯಾಗಲಿದೆ. ಇದೊಂದು ವಿಶೇಷವಾದ ಗೌರವ. ಯಾಕಂದ್ರೆ ನನ್ನ ಜಾವೆಲಿನ್ ಜೊತೆಗೆ ಅಭಿನವ ಬಿಂದ್ರಾ ಸರ್ ಅವರ ರೈಫಲ್ ಕೂಡ ಇದೆ ಎಂದು ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.

2008ರ ಒಲಿಂಪಿಕ್ ನಲ್ಲಿ ಅಭಿನವ್ ಬಿಂದ್ರಾ ಅವರು ಶೂಟಿಂಗ್ ನಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಇದೀಗ ವೈಯಕ್ತಿಕ ವಿಭಾಗದಲ್ಲಿ ಭಾರತದ ಪರ ಚಿನ್ನ ಗೆದ್ದಿರುವ ಎರಡು ಕ್ರೀಡಾಪಟುಗಳಲ್ಲಿ ನೀರಜ್ ಮತ್ತು ಅಭಿನವ್ ಬಿಂದ್ರಾ ಕೂಡ ಇದ್ದಾರೆ.
ನೀರಜ್ ಅವರ ಟ್ವಿಟ್ ಗೆ ಅಭಿನವ್ ಬಿಂದ್ರಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನೀರಜ್ ಜಾವೆಲಿನ್ ಈಗ ನನ್ನ ರೈಫಲ್ ಗೆ ಜೊತೆಯಾಗಿದೆ. ಇಷ್ಟು ದಿನ ನನ್ನ ರೈಫಲ್ ಗೆ ಏಕಾಂಗಿಯಾಗಿತ್ತು. ಆದ್ರೆ ಈಗ ಜೊತೆಗಾರ ಸೇರಿಕೊಂಡಿದೆ ಎಂದು ಅಭಿನವ್ ಬಿಂದ್ರಾ ಹೇಳಿದ್ದಾರೆ.
ಒಲಿಂಪಿಕ್ ಮ್ಯೂಸಿಯಂಗೆ ಸುಮಾರು 120 ವರ್ಷಗಳ ಇತಿಹಾಸವಿದೆ.