ಕೊನೆಯ ಕ್ಷಣದಲ್ಲಿ ಮಿಂಚಿದ ನವೀನ್, ಸ್ಟೀಲರ್ಸ್ ಪಂಗಾ ಗೆದ್ದ ದಬಾಂಗ್
ಪ್ರಸಕ್ತ ಋತುವಿನ ಪ್ರೋ ಕಬಡ್ಡಿ ಲೀಗ್‌ನಲ್ಲಿಯೇ ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿ 38-36 ಅಂತರದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯ ಗಳಿಸಿದ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ನಾಯಕ ನವೀನ್ ಎಕ್ಸ್‌ಪ್ರೆಸ್ ರೈಡಿಂಗ್‌ನಲ್ಲಿ 5 ಅಂಕಗಳನ್ನು ಗಳಿಸುವ ಮೂಲಕ ದಬಾಂಗ್ ಡೆಲ್ಲಿ ಕೆಸಿ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 17-12 ಅಂತರದಲ್ಲಿ ಮುನ್ನಡೆಯಿತು. ಡೆಲ್ಲಿ ಪರ ಟ್ಯಾಕಲ್‌ನಲ್ಲಿ ವಿಜಯ ಕುಮಾರ್ 2 ಅಂಕಗಳನ್ನು ಗಳಿಸಿ ಒಂದು ಹಂತದಲ್ಲಿ ಸಮಬಲ ಸಾಧಿಸಿದ್ದ ತಂಡಕ್ಕೆ ಮುನ್ನಡೆಗೆ ಅವಕಾಶ ಕಲ್ಪಿಸಿದರು. ರೈಡಿಂಗ್‌ನಲ್ಲಿ ಮಂಜಿತ್ ಹಾಗೂ ಅಶು ಮಲಿಕ್ ತಲಾ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಹರಿಯಾಣ ಸ್ಟೀಲರ್ಸ್ ಪರ ರೈಡಿಂಗ್‌ನಲ್ಲಿ ಮಂಜೀತ್ 6 ಅಂಕಗಳನ್ನು ಗಳಿಸಿ ದಿಟ್ಟ ಹೋರಾಟ ನೀಡುವಲ್ಲಿ ಸಫಲರಾದರು.
ಎರಡನೇ ಅವಧಿಯ ಕೊನೆಯ ಕ್ಷಣದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ದಬಾಂಗ್ ಸ್ಥಿರ ಪ್ರದರ್ಶನ ನೀಡಿತು. ಅಲ್ಲದೆ ಕೊನೆಯ ರೈಡ್ ನಲ್ಲಿ ನವೀನ್ ಕುಮಾರ್ ತೋರಿದ ಅಮೋಘ ಆಟಕ್ಕೆ ಹಾಲಿ ಚಾಂಪಿಯನ್ ತಂಡ, ತನ್ನ ಅಜೇಯ ಓಟವನ್ನು ಮುಂದುವರೆಸಿದೆ.
ನಾಯಕ ನವೀನ್ ಕುಮಾರ್ 15 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಕೊನೆಯ 40 ಸೆಕೆಂಡುಗಳು ಬಾಕಿ ಇರುವಾಗ ಪಂದ್ಯ 36-36 ರಲ್ಲಿ ಸಮಬಲಗೊಂಡಿತ್ತು. ನವೀನ್ ಕುಮಾರ್ ಕೊನೆಯ ರೈಡ್‌ನಲ್ಲಿ 2 ಅಂಕಗಳನ್ನು ಗಳಿಸಿ ತಂಡಕ್ಕೆ ಅಮೂಲ್ಯ ಜಯ ತಂದಿತ್ತರು.
Naveen, Dabang Delhi K.C., Haryana Steelers