ಆಸ್ಟ್ರೇಲಿಯಾ(Australia)ದಲ್ಲಿ ನಡೆಯಲಿರುವ ಟಿ20 ವಿಶ್ವಕಪ್(T20 World Cup) ಟೂರ್ನಿಯ ಬೆನ್ನಲ್ಲೇ ಆಫ್ಘಾನಿಸ್ತಾನ ತಂಡ ನವೆಂಬರ್ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವೆ ನವೆಂಬರ್ನಲ್ಲಿ ಏಕದಿನ ಅಂತಾರಾಷ್ಟ್ರೀಯ(ODI) ಸರಣಿ ನಡೆಯಲಿದೆ.
ಈ ಹಿಂದೆ ನಿಗದಿಯಾದಂತೆ ಉಭಯ ತಂಡಗಳು 2023ರ ಫೆಬ್ರವರಿಯಲ್ಲಿ ಮುಖಾಮುಖಿ ಆಗಬೇಕಿತ್ತು. ಆದರೆ ಇದೀಗ ಮುಂದಿನ ವರ್ಷ ನಡೆಯುವ ODI ವಿಶ್ವಕಪ್ ಹಿನ್ನೆಲೆಯಲ್ಲಿ ವಿಶ್ವಕಪ್ ಟೂರ್ನಿಯ ಸೂಪರ್ ಲೀಗ್ನ(World Cup ODI Super League) ಭಾಗವಾಗಿ ಮೂರು ಪಂದ್ಯಗಳನ್ನ ಆಯೋಜಿಸಲಾಗಿದೆ. ಅದರಂತೆ ಎರಡು ತಂಡಗಳ ನಡುವೆ ನವೆಂಬರ್ 25, 27 ಮತ್ತು 30ರಂದು ಶ್ರೀಲಂಕಾದ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಎರಡು ತಂಡಗಳ ಮುಂದಿನ ವರ್ಷ ನಡೆಯಬೇಕಿದ್ದ ಸರಣಿಯನ್ನು ನಿಗದಿಗಿಂತ ಮೊದಲೇ ನಡೆಸಲು ಒಪ್ಪಿದ ಹಿನ್ನೆಲೆಯಲ್ಲಿ ಎರಡು ರಾಷ್ಟ್ರಗಳು ನವೆಂಬರ್ನಲ್ಲೇ ಸರಣಿ ನಡೆಸಲು ಮುಂದಾಗಿವೆ. ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವೆ ದ್ವಿಪಕ್ಷೀಯ ಏಕದಿನ ಸರಣಿ(Bilateral ODI series) ನಡೆಯಲಿದೆ. ಈವರೆಗೂ ಊಭಯ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಏಷ್ಯಾಕಪ್ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಶ್ರೀಲಂಕಾ 3-1ರ ಮುನ್ನಡೆ ಹೊಂದಿದೆ.
ಮುಂದಿನ ವರ್ಷ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯ ಸೂಪರ್ ಲೀಗ್ನಲ್ಲಿ ಅಫ್ಘಾನಿಸ್ತಾನ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 10ರಲ್ಲಿ ಗೆದ್ದು 100 ಅಂಕಗಳಿಸಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ ಶ್ರೀಲಂಕಾ 18 ಪಂದ್ಯಗಳಲ್ಲಿ ಕೇವಲ 62 ಅಂಕಗಳನ್ನು ಪಡೆಯುವ ಮೂಲಕ ಅಫ್ಘಾನಿಸ್ತಾನಕ್ಕಿಂತ ಮೂರು ಸ್ಥಾನ ಕೆಳಗಿದೆ. ವಿಶ್ವಕಪ್ ಟೂರ್ನಿಯ ಸೂಪರ್ ಲೀಗ್ನ ಟಾಪ್ ಎಂಟು ತಂಡಗಳು ಮುಂದಿನ ವರ್ಷ ನಡೆಯುವ ODI ವಿಶ್ವಕಪ್ಗೆ ನೇರವಾಗಿ ಅರ್ಹತೆಯ ಪಡೆಯಲಿವೆ. ಪಂದ್ಯಾವಳಿಯ ಆತಿಥ್ಯವಹಿಸಲಿರುವ ಟೀಂ ಇಂಡಿಯಾ, ಮೆಗಾ ಈವೆಂಟ್ಗೆ ನೇರವಾಗಿ ಅರ್ಹತೆ ಪಡೆಯಲಿದೆ.