Mumbai Half Marathon 2022- ಛಗನ್, ಕವಿತಾಗೆ ಮುಂಬೈ ಹಾಫ್ ಮ್ಯಾರಥಾನ್ ಕಿರೀಟ

ಮುಂಬೈ, ಆಗಸ್ಟ್ 21- ಮಹಾರಾಷ್ಟ್ರದ ಛಗನ್ ಬೊಂಬಾಲೆ ಮತ್ತು ಆಂಧ್ರ ಪ್ರದೇಶಧ ಕವಿತಾ ರೆಡ್ಡಿ ಪ್ರತಿಷ್ಠಿತ ಮುಂಬೈ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. ೫ನೇ ಆವೃತ್ತಿಯ ಮ್ಯಾರಥಾನ್ ಭಾನುವಾರ ಇಲ್ಲಿನ ಬಾಂದ್ರಾ ಕುರ್ಲಾ ಸಂಕೀರ್ಣ(ಬಿಕೆಸಿ)ಯಲ್ಲಿ ನಡೆಯಿತು.

ಮೋಡ ಮುಸುಕಿದ ಮುಂಜಾನೆಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಬೊಂಬಾಲೆ 21 ಕಿಲೋ ಮೀಟರ್ ದೂರವನ್ನು1 ಗಂಟೆ 16.11 ನಿಮಿಷಗಳಲ್ಲಿ ಪೂರ್ಣಗೊಳಿಸಿ ಅಗ್ರಸ್ಥಾನ ಪಡೆದರು. ತಮ್ಮ ಪ್ರತಿಸ್ಪರ್ಧಿಗಳನ್ನು ಒಬ್ಬೊಬ್ಬರಂತೆ ಹಿಂದಿಕ್ಕಿ ಮುನ್ನುಗ್ಗಿದ ಮಹಾರಾಷ್ಟ್ರ ಓಟಗಾರ 2ನೇ ಸ್ಥಾನ ಪಡೆದ ಭಗತ್‌ಸಿಂಗ್ ವಾಲ್ವಿ ಅವರಿಗಿಂತ ಒಂದು ನಿಮಿಷ ಮೊದಲೇ ಗುರಿ ಮುಟ್ಟಿದರು. ವಾಲ್ವಿ 1 ಗಂಟೆ 17.51 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದರೆ, 1 ಗಂಟೆ 18.20 ನಿಮಿಷಗಳಲ್ಲಿ 21 ಕಿಲೋ ಮೀಟರ್ ಓಡಿದ ಅನಿಲ್ ಜಿಂದಾಲ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಮಹಿಳಾ ವಿಭಾಗದ ಸ್ಪರ್ಧೆ ಏಕಪಕ್ಷೀಯವಾಗಿ ಸಾಗಿತು. ಕವಿತಾ ರೆಡ್ಡಿ ಸ್ಪರ್ಧೆಯುದ್ದಕ್ಕೂ ಉತ್ತಮ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 1 ಗಂಟೆ 37.03 ನಿಮಿಷಗಳಲ್ಲಿ ಗೆಲುವಿನ ಗೆರೆ ದಾಟಿದರು. ಅವರ ಹತ್ತಿರದ ಪ್ರತಿಸ್ಪರ್ಧಿ ತನ್ಮಯ ಕರ್ಮಕಾರ್‌ರನ್ನು 3 ನಿಮಿಷಗಳಿಂದ ಹಿಂದಿಕ್ಕಿದರು. ತನ್ಮಯ 1 ಗಂಟೆ 40.18 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಬೆಳ್ಳಿ ಜಯಿಸಿದರೆ, ಕೇತಕಿ ಸಾಠೆ 1 ಗಂಟೆ 44.55 ನಿಮಿಷಗಳಲ್ಲಿ ತಲುಪಿ 3ನೇ ಸ್ಥಾನ ಗಳಿಸಿದರು.
‘

ಕ್ರಿಕೆಟ್ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಮ್ಯಾರಥಾನ್‌ಗೆ ಚಾಲನೆ ನೀಡಿದ್ದಲ್ಲದೇ ವಿಜೇತರನ್ನು ಸನ್ಮಾನಿಸಿದರು. ‘ಕೊರೋನಾ ಮಹಾಮಾರಿಯಿಂದ ಕಳೆದ ಎರಡು ವರ್ಷಗಳಲ್ಲಿ ಎಲ್ಲರಿಗೂ ಬಹಳ ತೊಂದರೆಯಾಗಿದೆ. ಆದರೆ ಈಗ ಕೋವಿಡ್ ಬಳಿಕ ನಗರದಲ್ಲಿ ನಡೆದ ಅತಿದೊಡ್ಡ ಸ್ಪರ್ಧೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿ ಖುಷಿಯಾಗುತ್ತಿದೆ’ ಎಂದು ತೆಂಡುಲ್ಕರ್ ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡರು.
ಪುರುಷರ 10ಕೆ ಓಟದಲ್ಲಿ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಅಮಿತ್ ಮಾಲಿ 33.42 ನಿಮಿಷಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಕರಣ್ ಶರ್ಮಾ 33.44 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ೨ನೇ ಸ್ಥಾನ ಗಳಿಸಿದರು. ಸಂಜಯ್ ಝಕಾನೆ 33.50 ನಿಮಿಷಗಳಲ್ಲಿ 10 ಕಿಲೋ ಮೀಟರ್ ಓಡಿ 3ನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲೂ ಉತ್ತಮ ಸ್ಪರ್ಧೆ ಕಂಡುಬಂತು. ರೋಹಿಣಿ ಮಾಯಾ ಪಾಟೀಲ್ 41.32 ನಿಮಿಷಗಳಲ್ಲಿ ಓಡಿ ಮೊದಲ ಸ್ಥಾನ ಪಡೆದರೆ, ಪ್ರಿಯಾಂಕ ಪೈಕಾರಾವ್ 42.26 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ೨ನೇ ಸ್ಥಾನ ಪಡೆದರು. ಪ್ರಿಯಾಂಕ ಕೈಲಾಶ್(43.51 ನಿಮಿಷ) ಕಂಚು ಪಡೆದರು.
ಎನ್‌ಇಬಿ ಸ್ಪೋರ್ಟ್ಸ್ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ವಿವಿಧ ಕ್ಷೇತ್ರಗಳ 13500ಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡಿದ್ದರು. ಹಾಫ್ ಮ್ಯಾರಥಾನ್(21ಕೆ), 10ಕೆ ಮತ್ತು 5ಕೆ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. Chhagan Bombale and Kavitha Reddy Win