MSD & Kohli – 7 +18 – ಟೀಮ್ ಇಂಡಿಯಾದ ಜೊತೆ ನಮ್ಮ ಕಥೆಯೇ ಸ್ಪೆಷಲ್..!
ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಆಗಿದ್ದರು. ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಆಕ್ರಮಣಕಾರಿ ಪ್ರವೃತ್ತಿಯ ನಾಯಕನಾಗಿದ್ದರು.
ಇವರಿಬ್ಬರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಯಶಸ್ಸಿನ ಉತ್ತುಂಗಕ್ಕೇರಿತ್ತು. ನಾಯಕನಾಗಿ ಧೋನಿ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹಾಗೇ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆದ್ದಿಲ್ಲ. ಆದ್ರೆ ಹಲವು ದಾಖಲೆಗಳನ್ನು ಟೀಮ್ ಇಂಡಿಯಾ ಬರೆದಿದೆ. ಜೊತೆಗೆ ವಿರಾಟ್ ಕೊಹ್ಲಿ ಕೂಡ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಧೋನಿ ಮತ್ತು ವಿರಾಟ್ ಜೊತೆಯಾಗಿ ಆಡುತ್ತಿದ್ದಾಗ ಹಲವು ಟೀಕೆಗಳು, ವಾದಗಳು ಕೇಳಿಬಂದಿದ್ದವು. ವೈಯಕ್ತಿಕವಾಗಿ ಧೋನಿ ಮತ್ತು ಕೊಹ್ಲಿ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.
ಆದ್ರೆ ಅವೆಲ್ಲ ಸುಳ್ಳು. ಗಾಸಿಪ್ ಗಳು. ಹಾಗೇ ನೋಡಿದ್ರೆ ಧೋನಿ ಮತ್ತು ಕೊಹ್ಲಿ ಉತ್ತಮ ಒಡನಾಡಿಗಳಾಗಿದ್ದರು. ಹೌದು, ವೈಯಕ್ತಿಕವಾಗಿ ತೀರಾ ಹತ್ತಿರ ಇಲ್ಲದಿದ್ರೂ ಕೂಡ ಆಟಗಾರರಾಗಿ,ವೃತ್ತಿಪರತೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಗೆಳೆತನ, ಗೌರವವನ್ನು ಇಟ್ಟುಕೊಂಡಿದ್ದರು. ಜೊತೆಗೆ ವಿರಾಟ್ ಕೊಹ್ಲಿ ನಾಯಕನಾಗಿದ್ದಲೂ ಕೂಡ ಧೋನಿ ಸಾಥ್ ನೀಡುತ್ತಿದ್ದರು. ಅಷ್ಟೇ ಯಾಕೆ, 2021ರ ಟಿ-20 ವಿಶ್ವಕಪ್ ನಲ್ಲೂ ಧೋನಿ ವಿರಾಟ್ ಸಾರಥ್ಯದ ಟೀಮ್ ಇಂಡಿಯಾಗೆ ಮೆಂಟರ್ ಕೂಡ ಆಗಿದ್ದರು.
ಇದೀಗ ವಿರಾಟ್ ಧೋನಿ ಜೊತೆಗಿನ ನಂಟನ್ನು ಭಾವನಾತ್ಮಕವಾಗಿ ಶೇರ್ ಮಾಡಿಕೊಂಡಿದ್ದಾರೆ.
ಈ ವ್ಯಕ್ತಿಯ ವಿಶ್ವಾಸದ ಉಪನಾಯಕನಾಗಿದ್ದದ್ದು ನನ್ನ ವೃತ್ತಿ ಬದುಕಿನ ಅತ್ಯಂತ ಆನಂದದಾಯಕ ದಿನಗಳಾಗಿದ್ದವು ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.
7+18- ಟೀಮ್ ಇಂಡಿಯಾದ ಜೊತೆ ನಮ್ಮ ಕಥೆಯೇ ವಿಭಿನ್ನವಾಗಿತ್ತು ಎಂದು ಕೂಡ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಇಲ್ಲಿ 7 ಅಂದ್ರೆ ಮಹೇಂದ್ರ ಸಿಂಗ್ ಧೋನಿ ಅವರ ಜೆರ್ಸಿ ನಂಬರ್ ಹಾಗೇ 18 ಅಂದ್ರೆ ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್.
ಧೋನಿ ನಾಯಕತ್ವದಲ್ಲೇ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಹಂತ ಹಂತವಾಗಿ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ವಿರಾಟ್ ಕೊಹ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದರು. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದ ಕೊಹ್ಲಿ, ಧೋನಿ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾವನ್ನು ಇನ್ನಷ್ಟು ಉತ್ತುಂಗಕ್ಕೇರಿಸಿದ್ದರು.
ಆದ್ರೆ ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ರನ್ ಮತ್ತು ಶತಕದ ಬರವನ್ನು ಎದುರಿಸುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ ಆಗಸ್ಟ್ 28ರಂದು ನಡೆಯಲಿರುವ ಪಾಕ್ ವಿರುದ್ಧದ ಪಂದ್ಯ ವಿರಾಟ್ ಗೆ ಟೆಸ್ಟಿಂಗ್ ಟೈಮ್ ಆಗಲಿದೆ.