IPLನ ಹೊಸ ತಂಡ ಲಕ್ನೋ ತಂಡದ ಹೆಸರು ಏನು ಇರಬಹುದು ಅನ್ನುವ ಕುತೂಹಲವಿತ್ತು. ಆದರೆ ಐಪಿಎಲ್ ಆಟಗಾರರ ಮೆಗಾ ಹರಾಜಿಗೂ ಮುನ್ನ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಲಕ್ನೋ ಫ್ರಾಂಚೈಸಿ ತನ್ನ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಎಂದು ಹೆಸರು ಇಟ್ಟುಕೊಂಡಿದೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ತಂಡ ಲಕ್ನೋವಾಗಿದೆ. ಸಂಜೀವ್ ಗೋಯೆಂಕಾ ಈ ತಂಡದ ಮಾಲೀಕರಾಗಿದ್ದಾರೆ. ಲಕ್ನೋ ತಂಡಕ್ಕಾಗಿ ಸಂಜೀವ್ ಗೊಯೆಂಕಾ 7090 ಕೋಟಿ ರೂಪಾಯಿ ಬಿಡ್ ಮಾಡಿದ್ದರು. ಗೊಯೆಂಕಾ ಈ ಹಿಂದೆ ಪುಣೆ ಸೂಪರ್ ಜೈಂಟ್ಸ್ ತಂಡದ ಮಾಲೀಕರಾಗಿದ್ದರು. ಆದರೆ 2 ವರ್ಷಗಳಲ್ಲಿ ಆ ಒಪ್ಪಂದ ಮುಗಿದಿತ್ತು. ಈಗ ಲಕ್ನೋ ತಂಡವನ್ನು ಖರೀದಿ ಮಾಡಿರುವ ಗೊಯೆಂಕಾ ಹಳೆಯ ಹೆಸರನ್ನು ಮುಂದುವರೆಸಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ತಂಡ ಎಂಬ ದಾಖಲೆ ಕೂಡ ಲಕ್ನೋ ತಂಡಕ್ಕಿದೆ. ಈ ತಂಡ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಕೆಎಲ್ ರಾಹುಲ್ ಅವರನ್ನು ನಾಯಕನಾಗಿ ಆರಿಸಿಕೊಂಡಿದ್ದಾರೆ. ವಿದೇಶಿ ಆಟಗಾರನ ಕೋಟಾದಲ್ಲಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ರನ್ನು ಆಯ್ಕೆ ಮಾಡಿಕೊಂಡಿದೆ. ಜೊತೆಗೆ ಮೂರನೇ ಆಟಗಾರನಾಗಿ ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್ ಅವರನ್ನು ನೇಮಕ ಮಾಡಿದೆ. ಕೆಕೆಆರ್ ತಂಡವನ್ನು ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಮಾಜಿ ನಾಯಕ ಗೌತಮ್ ಗಂಭೀರ್ ಮೆಂಟರ್ ಆಗಿದ್ದಾರೆ. ಒಟ್ಟಿನಲ್ಲಿ ಲಕ್ನೋ ಫ್ರಾಂಚೈಸಿಯ ನಡೆ ಬಗ್ಗೆ ಕುತೂಹಲ ಹೆಚ್ಚುತ್ತಿದೆ.