Lasith Malinga ಶ್ರೀಲಂಕಾ ತಂಡದ ಸ್ಪೇಷಲಿಸ್ಟ್ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗಾ ನೇಮಕ
ಲಸಿತ್ ಮಾಲಿಂಗಾ ಅವರು ಶ್ರೀಲಂಕಾ ತಂಡದ ಸ್ಪೇಷಲಿಸ್ಟ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಲಿಯು ಈ ಆದೇಶವನ್ನು ಹೊರಡಿಸಿದ್ದು, ಮುಂಬರುವ ಆಸ್ಟ್ರೇಲಿಯಾ ವಿರುದ್ದದ ಟಿ-20 ಸರಣಿಯನ್ನು ಮುಂದಿಟ್ಟು ಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವೆ ಐದು ಟಿ-20 ಪಂದ್ಯಗಳ ಸರಣಿ ನಡೆಯಲಿದೆ. ಫೆಬ್ರವರಿ 11ರಿಂದ ಈ ಟಿ-20 ಸರಣಿ ಆರಂಭವಾಗಲಿದೆ.
38ರ ಹರೆಯದ ಲಸಿತ್ ಮಾಲಿಂಗಾ ಅವರು ಟಿ-20 ಕ್ರಿಕೆಟ್ ನ ಸ್ಪೇಷಲಿಸ್ಟ್ ಬೌಲರ್ ಎಂದೇ ಖ್ಯಾತಿ ಪಡೆದಿದ್ದರು. ಅದರಲ್ಲೂ ಡೆತ್ ಓವರ್ ಗಳಲ್ಲಿ ಮಾಲಿಂಗ ಅವರು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದರು.
ಲಸಿತ್ ಮಾಲಿಂಗಾ ಅವರು ಅದ್ಭುತ ಬೌಲರ್. ಅದರಲ್ಲೂ ಟಿ-20 ಕ್ರಿಕೆಟ್ ನಲ್ಲಿ ಅಮೋಘ ಸಾಧನೆಯನ್ನು ಕೂಡ ಮಾಡಿದ್ದಾರೆ. ಅವರ ಅನುಭವ ಮತ್ತು ಕೌಶಲ್ಯಗಳು ಶ್ರೀಲಂಕಾ ತಂಡಕ್ಕೆ ಅಗತ್ಯವಿದೆ. ಅವರ ಮಾರ್ಗದರ್ಶನ ಲಂಕಾ ಬೌಲರ್ ಗಳಿಗೆ ವರದಾನವಾಗಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.
Lasith Malinga named SL specialist bowling coach for Aus tour
ಐಪಿಎಲ್ ನಲ್ಲಿ ಮುಂಬಯ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದ ಲಸಿತ್ ಮಾಲಿಂಗಾ ಅವರು 2018ರಲ್ಲಿ ತಂಡದ ಮೆಂಟರ್ ಆಗಿಯೂ ಸೇವೆ ಸಲ್ಲಿಸಿದ್ದರು.
ಲಸಿತ್ ಮಾಲಿಂಗಾ ಅವರು 30 ಟೆಸ್ಟ್, 226 ಏಕದಿನ ಮತ್ತು 84 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ ನೂರಕ್ಕಿಂತ ಹೆಚ್ಚು ವಿಕೆಟ್ ಪಡೆದ ನಾಲ್ವರು ಬೌಲರ್ ಗಳ ಪೈಕಿ ಮಾಲಿಂಗಾ ಕೂಡ ಒಬ್ಬರಾಗಿದ್ದಾರೆ.
ಲಂಕಾ ತಂಡದಲ್ಲಿ ಪ್ರತಿಭಾನ್ವಿತ ಯುವ ಬೌಲರ್ ಗಳಿದ್ದಾರೆ. ನನ್ನ ಅನುಭವ ಮತ್ತು ಕೌಶಲ್ಯಗಳನ್ನು ಯುವ ಬೌಲರ್ ಗಳ ಜೊತೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ ಎಂದು ಲಸಿತ್ ಮಾಲಿಂಗಾ ಹೇಳಿದ್ದಾರೆ.
ಇನ್ನೊಂದೆಡೆ ರಮೇಶ್ ರತ್ನಾಯಕೆ ಅವರು ಲಂಕಾ ತಂಡದ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ.