ಲಖನೌ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಲೀಗ್ ಹಂತದಲ್ಲಿ ತನ್ನ ಅಂತಿಮ ಪಂದ್ಯ ಆಡುತ್ತಿವೆ. ಇವೆರಡು ತಂಡಗಳ ಫೈಟ್ ಹಲವು ಲೆಕ್ಕಾಚಾರ ಹುಟ್ಟುಹಾಕಿದೆ. ಇವೆರಡು ತಂಡಗಳ ಭವಿಷ್ಯದ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಭವಿಷ್ಯವೂ ಅಡಗಿದೆ. ಹೀಗಾಗಿ ಡಿ.ವೈ. ಪಾಟೀಲ್ ಮೈದಾನದಲ್ಲಿ ನಡೆಯುವ ಈ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ.
ಲಖನೌ ಸೂಪರ್ ಜೈಂಟ್ಸ್ 16 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ 18 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿ ಕ್ವಾಲಿಫೈಯರ್ಗೆ ಸ್ಥಾನ ಫಿಕ್ಸ್ ಮಾಡಿಕೊಳ್ಳುತ್ತದೆ. ಕೆಕೆಆರ್ ಬಳಿ 12 ಅಂಕವಿದೆ. ಗೆದ್ದರೆ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ 14 ಅಂಕಗಳನ್ನು ಪಡೆಯುತ್ತದೆ. ಕೆಕೆಆರ್ ನೆಟ್ ರನ್ ರೇಟ್ +0.160 ಇರುವುದರಿಂದ ಆರ್ಸಿಬಿಗಿಂತ ಮುಂದೆ ನಿಲ್ಲುತ್ತದೆ. ಅಷ್ಟೇ ಅಲ್ಲ ಆರ್ಸಿಬಿ ಕೊನೆಯ ಗುಜರಾತ್ ವಿರುದ್ಧದ ಪಂದ್ಯವನ್ನು ಗೆದ್ದರೆ ಮಾತ್ರ ಪ್ಲೇ-ಆಫ್ ಸಾಧ್ಯ ಅನ್ನುವ ಹಾಗಾಗುತ್ತದೆ. ಡೆಲ್ಲಿ ಕೊನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯಲ್ಲಿಇಲ್ಲಿ ತನಕ 5 ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿದೆ. ಈಗ ಅಜಿಂಕ್ಯಾ ರಹಾನೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ವೆಂಕಟೇಶ್ ಅಯ್ಯರ್ ಜೊತೆ ಹೊಸ ಆಟಗಾರ ಇನ್ನಿಂಗ್ಸ್ ಆರಂಭಿಸಬೇಕಾಗುತ್ತದೆ. ಸ್ಯಾಮ್ ಬಿಲ್ಲಿಂಗ್ಸ್ ಅಥವಾ ಶೆಲ್ಡನ್ ಜಾಕ್ಸನ್ ಈ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಬ್ಯಾಟ್ ನಿಂದ ಮತ್ತೊಮ್ಮೆ ದೊಡ್ಡ ರನ್ ಬರಬೇಕು. ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಕೊನೆಯಲ್ಲಿ ಲೆಕ್ಕಾಚಾರ ಬದಲಿಸಬಲ್ಲರು.
ಉಮೇಶ್ ಯಾದವ್, ಟಿಮ್ ಸೌಥಿ ಮತ್ತು ಆ್ಯಂಡ್ರೆ ರಸೆಲ್ ವೇಗದ ಬೌಲಿಂಗ್ ವಿಭಾಗವನ್ನು ನಿರ್ವಹಿಸಿದರೆ, ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ಬಲೆ ಬೀಸಬಲ್ಲರು. ವೆಂಕೇಶ್ ಅಯ್ಯರ್ ಮತ್ತು ನಿತೀಶ್ ರಾಣಾ ಕೂಡ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ಓಪನರ್ಗಳಾದ ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟಾನ್ ಡಿ ಕಾಕ್ ಈ ಬಾರಿಯ ಐಪಿಎಲ್ನಲ್ಲಿ 36.13 ಸರಾಸರಿ ಹೊಂದಿದ್ದಾರೆ. ಆದರೆ ಲಖನೌದ ಸಮಸ್ಯೆ ಆರಂಭವಾಗುವುದು ಓಪನರ್ ಗಳು ಔಟಾದ ಬಳಿಕ. 3ನೇ ಕ್ರಮಾಂಕದಿಂದ 6ನೇ ಕ್ರಮಾಂಕದ ತನಕ ಲಖನೌ ಬ್ಯಾಟರ್ ಗಳು ಸರಾಸರಿ ಕೇವಲ 21.88 ಮಾತ್ರ ಆಗಿದೆ. ಹೀಗಾಗಿ ದೀಪಕ್ ಹೂಡ, ಕೃನಾಲ್ ಪಾಂಡ್ಯಾ, ಮಾರ್ಕಸ್ ಸ್ಟೋಯ್ನಿಸ್, ಆಯಷ್ ಬಡೋನಿ ಮತ್ತು ಜೇಸನ್ ಹೋಲ್ಡರ್ ಮೇಲೆ ಒತ್ತಡವಿದೆ. ಬೌಲಿಂಗ್ನಲ್ಲಿ ಲಖನೌ ಮೌಸಿನ್ ಖಾನ್, ಆವೇಶ್ ಖಾನ್, ದುಶ್ಮಂತ್ ಚಾಮೀರ ಮತ್ತು ಜೇಸನ್ ಹೋಲ್ಡರ್ ವೇಗದ ಮೇಲೆ ನಂಬಿಕೆ ಇಟ್ಟಿದೆ. ರವಿ ಬಿಷ್ಣೋಯಿ ಮತ್ತು ಕೃನಾಲ್ ಪಾಂಡ್ಯಾ ಕೂಡ ಬೌಲರ್ ಗಳೇ.
13 ಪಂದ್ಯಗಳಿಂದ 16 ಅಂಕಗಳನ್ನು ಲಖನೌ ಪಡೆದಿದ್ದರೂ ಬ್ಯಾಟಿಂಗ್ ಸಮಸ್ಯೆಯಿಂದ ಪ್ಲೇ-ಆಫ್ ಸ್ಥಾನ ಇನ್ನೂ ಅಲ್ಲಾಡುತ್ತಿದೆ. ಒಂದು ವೇಳೆ ಕೆಕೆಆರ್ ಗೆದ್ದರೆ ಅಂಕಪಟ್ಟಿಯಲ್ಲಿ ಪ್ಲೇ-ಆಫ್ ಸ್ಥಾನಕ್ಕೆ ಮತ್ತಷ್ಟು ಫೈಟ್ ಹೆಚ್ಚಾಗುವುದು ಖಚಿತ.