ಐಪಿಎಲ್ನ ಕೆಲ ಫ್ರಾಂಚೈಸಿಗಳಲ್ಲಿ ತಂಡವನ್ನು ಮುನ್ನಡೆಸಲು ನಾಯಕರ ಬಗ್ಗೆ ಚರ್ಚೆ ಆಗುತ್ತಿದೆ. ಮಾಜಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಮುಂದಿನ ಸೀಸನ್ಗೆ ತನ್ನ ನಾಯಕ ಯಾರು ಅನ್ನುವುದನ್ನು ಅಂತಿಮಗೊಳಿಸಿದೆ. ಐಪಿಎಲ್ ಆಟಗಾರರ ಮೆಗಾ ಆಕ್ಷನ್ನಲ್ಲಿ ಕೆಕೆಆರ್ ಖರೀದಿ ಮಾಡಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.
ಶ್ರೇಯಸ್ ಅಯ್ಯರ್ ಐಪಿಎಲ್ ಹರಾಜಿನಲ್ಲಿ 12.5 ಕೋಟಿ ರೂಪಾಯಿ ಪಡೆದಿದ್ದರು. ಕೆಕೆಆರ್ ಉಳಿಸಿಕೊಂಡಿರುವ ಆಟಗಾರರ ಪೈಕಿ ಆ್ಯಂಡ್ರೆ ರಸೆಲ್ 12 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಸದ್ಯ ಕೆಕೆಆರ್ನ ದುಬಾರಿ ಆಟಗಾರನಾಗಿರುವ ಶ್ರೇಯಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ಬಾರಿ ಕೆಕೆಆರ್ ಇಯಾನ್ ಮೊರ್ಗಾನ್ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿತ್ತು. ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಗ್ಗರಿಸಿತ್ತು. ಐಪಿಎಲ್ನಲ್ಲಿ ಶ್ರೇಯಸ್ಗೆ ತಂಡವನ್ನು ಮುನ್ನಡೆಸಿದ ಅನುಭವವೂ ಇದೆ. ಶ್ರೇಯಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 2019ರಲ್ಲಿ ಎಲಿಮಿನೇಟರ್ಗೆ ಹಾಗೂ 2020ರಲ್ಲಿ ಫೈನಲ್ಗೆ ಕೊಂಡೊಯ್ದಿದ್ದರು. 2021ರಲ್ಲಿ ಗಾಯದ ಕಾರಣ ಐಪಿಎಲ್ನ ಮೊದಲ ಭಾಗವನ್ನು ಆಡಲಿಲ್ಲ. ಈ ಹಂತದಲ್ಲಿ ರಿಷಬ್ ಪಂತ್ ತಂಡದ ನಾಯಕನಾದರು. ಆದರೆ ಶ್ರೇಯಸ್ ಫಿಟ್ ಆಗಿ ವಾಪಾಸ್ ಬಂದರೂ ಡಿ.ಸಿ. ಮ್ಯಾಜೇಜ್ಮೆಂಟ್ ಶ್ರೇಯಸ್ಗೆ ನಾಯಕನ ಸ್ಥಾನ ಕೊಡಲಿಲ್ಲ.
ಈಗ ಅಯ್ಯರ್ಗೆ ಕೆಕೆಆರ್ ನಾಯಕನ ಪಟ್ಟ ಕಟ್ಟಿದೆ. ಶ್ರೇಯಸ್ ಅನುಭವವನ್ನು ಬಳಸಿಕೊಳ್ಳುವ ಉದ್ದೇಶದಿಂದಲೇ ನೈಟ್ ರೈಡರ್ಸ್ ಈ ನಿರ್ಧಾರ ಮಾಡಿದೆ.