ಭಾರತ -ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ – ಸುದ್ದಿಗೋಷ್ಠಿಗೆ ವಿರಾಟ್ ಗೈರು ? ರಾಹುಲ್‍ಗೆ ಅವಕಾಶ..?
ಬಿಸಿಸಿಐ ಮತ್ತು ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡುವಿನ ಜಟಾಪಟಿ ಇನ್ನೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಈಗಾಗಲೇ ಕಠಿಣ ತಾಲೀಮು ನಡೆಸುತ್ತಿದೆ. ಹೆಡ್ ಕೋಚ್ ರಾಹುಲ್ ದ್ರಾವಿಡ್ ತಂಡದ ಆಟಗಾರರಿಗೆ ಅತ್ಯುತ್ತಮ ಮಟ್ಟದ ಸಲಹೆ ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ.
ಇದೀಗ ಮೊದಲ ಟೆಸ್ಟ್ ಆರಂಭಕ್ಕೆ ಮುನ್ನವೇ ಟೀಮ್ ಇಂಡಿಯಾದಿಂದ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಸುದ್ದಿಯನ್ನು ಕೇಳಿದಾಗ ಸಹಜವಾಗಿಯೇ ಬಿಸಿಸಿಐ ವಿರಾಟ್ ಕೊಹ್ಲಿಯವರನ್ನು ಟೆಸ್ಟ್ ನಾಯಕತ್ವದಿಂದ ಹೊರಗಿಡುವ ದಿನ ದೂರ ಉಳಿದಿಲ್ಲ ಎಂಬುದು ಅರ್ಥವಾಗುತ್ತದೆ.
ಹೌದು, ಯಾವುದೇ ಸರಣಿಯಾಗಲೇ ಆರಂಭದಲ್ಲಿ ಸುದ್ದಿಗೋಷ್ಠಿ ನಡೆಸುವುದು ತಂಡದ ನಾಯಕ. ಇದು ಟೀಮ್ ಇಂಡಿಯಾದಲ್ಲಿ ಮಾಮೂಲಿ ವಿಚಾರ. ಆದ್ರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ನಡೆಯುವ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್. ರಾಹುಲ್ ಭಾಗಿಯಾಗಲಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಮೂಲಕ ವಿರಾಟ್ ಕೊಹ್ಲಿಗೆ ಬಿಸಿಸಿಐ ಮತ್ತೆ ಮುಖಭಂಗ ಮಾಡಿದೆ. ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವಿನ ಮನಸ್ತಾಪಕ್ಕೆ ಇನ್ನೂ ಬ್ರೆಕ್ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ.
ಆದ್ರೆ ಬಿಸಿಸಿಐನ ಈ ನಿರ್ಧಾರ ಖಂಡಿತ ಸರಿಯಲ್ಲ. ಯಾಕಂದ್ರೆ ತಂಡದ ನಾಯಕನ ಬದಲು ಉಪನಾಯಕ ಸುದ್ದಿಗೋಷ್ಠಿ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ.
ಪ್ರತಿಷ್ಠಿತ ಸರಣಿಗೆ ಮುನ್ನವೇ ಬಿಸಿಸಿಐ ತಂಡದೊಳಗೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡುತ್ತಿರುವುದು ಖಂಡಿತ ಒಳ್ಳೆಯ ನಿರ್ಧಾರವಲ್ಲ. ಒಂದು ವೇಳೆ ಉಪನಾಯಕ ಸುದ್ದಿಗೋಷ್ಠಿ ನಡೆಸುವುದಾದ್ರೆ ಅದಕ್ಕೆ ಸ್ಪಷ್ಟವಾದ ಕಾರಣವನ್ನು ನೀಡಬೇಕಿತ್ತು. ಆದ್ರೆ ಏಕಾಏಕಿ ವಿರಾಟ್ ಕೊಹ್ಲಿ ಬದಲು ಕೆ.ಎಲ್. ರಾಹುಲ್ ಸುದ್ದಿಗೋಷ್ಠಿ ನಡೆಸುತ್ತಾರೆ ಅನ್ನೋದಾದ್ರೆ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುತ್ತಾರೆ ಅನ್ನೋ ಅನುಮಾನ ಕೂಡ ಕಾಡುತ್ತದೆ.
ಒಟ್ಟಿನಲ್ಲಿ ಬಿಸಿಸಿಐ ಮತ್ತು ವಿರಾಟ್ ನಡುವಿನ ಮುನಿಸು ತಂಡದೊಳಗೆ ಗಾಢವಾದ ಪರಿಣಾಮ ಬೀರುವುದಂತೂ ಸತ್ಯ. ಮೊದಲೇ ಗೊಂದಲದಲ್ಲಿರುವ ಟೀಮ್ ಇಂಡಿಯಾಗೆ ಬಿಸಿಸಿಐನ ಈ ನಿರ್ಧಾರ ಮತ್ತಷ್ಟು ಆಘಾತವನ್ನುಂಟು ಮಾಡಲಿದೆ.
ಅಂದ ಹಾಗೆ ಬಾಕ್ಸಿಂಗ್ ಡೇ ಟೆಸ್ಟ್ ಡಿಸೆಂಬರ್ 26ರಿಂದ ನಡೆಯಲಿದೆ. ಸುದ್ದಿಗೊಷ್ಠಿ ಡಿಸೆಂಬರ್ 24 ಅಥವಾ ಡಿಸೆಂಬರ್ 25ಕ್ಕೆ ನಡೆಯುವ ಸಾಧ್ಯತೆ ಇದೆ.
ಈ ನಡುವೆ, ಬಿಸಿಸಿಐಗೆ ಇನ್ನೊಂದು ರೀತಿಯ ಆತಂಕವೂ ಇದೆ. ಒಂದು ವೇಳೆ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ್ರೆ ಬಿಸಿಸಿಐ ವಿರುದ್ಧ ಮತ್ತೆ ಮಾತನಾಡಬಹುದು. ಆಗ ತಂಡದ ಮೇಲೆ ಗಾಢವಾದ ಪರಿಣಾಮ ಬೀರಬಹುದು. ಈ ಕಾರಣಕ್ಕೆ ವಿರಾಟ್ ಬದಲು ರಾಹುಲ್ ಗೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗೋ ಅವಕಾಶವನ್ನು ನೀಡಿರಬಹುದು.
ಒಟ್ಟಿನಲ್ಲಿ ಬಿಸಿಸಿಐ ಮತ್ತು ವಿರಾಟ್ ನಡುವಿನ ಭಿನ್ನಾಭಿಪ್ರಾಯ ಈ ಸರಣಿಯ ಮೇಲೆ ಕೆಟ್ಟ ಪರಿಣಾಮ ಬೀರದಿರಲಿ ಎಂಬುದೇ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.