ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಟರ್ಬನೇಟರ್ ಹರ್ಭಜನ್ ಸಿಂಗ್
ಟರ್ಬನೇಟರ್ ಹರ್ಭಜನ್ ಸಿಂಗ್ ಅವರು ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
23 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಟರ್ಬನೇಟರ್ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಆಕ್ರಮಣಕಾರಿ ಪ್ರವೃತ್ತಿಯ ಜೊತೆಗೆ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಕಳೆದ ಆರು ವರ್ಷಗಳಿಂದ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದಿಂದ ದೂರವೇ ಉಳಿದಿದ್ದರು. ಕೇವಲ ಐಪಿಎಲ್ ಟೂರ್ನಿಗಳಿಗೆ ಮಾತ್ರ ಸೀಮಿತವಾಗಿದ್ರು. ಇದೀಗ ತನ್ನ 23 ವರ್ಷಗಳ ಕ್ರಿಕೆಟ್ ಬದುಕಿಗೆ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಗುಡ್ ಬೈ ಹೇಳಿದ್ದಾರೆ.
ಮಾರ್ಚ್ 25, 1998ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಹರ್ಭಜನ್ ಸಿಂಗ್ ಆಸ್ಟ್ರೆಲಿಯಾ ವಿರುದ್ದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಹಾಗೂ ಐತಿಹಾಸಿಕ ಕೊಲ್ಕತ್ತಾ ಟೆಸ್ಟ್ ನಲ್ಲಿ ಆಸ್ಟ್ರೆಲಿಯಾ ವಿರುದ್ಧ ದಾಖಲಿಸಿದ್ದ ರೋಚಕ ಗೆಲುವಿನಲ್ಲಿ ಭಜ್ಜಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಹಲವು ರೋಚಕ ಗೆಲುವಿನಲ್ಲೂ ಹರ್ಭಜನ್ ಸಿಂಗ್ ಭಾಗಿಯಾಗಿದ್ದರು. 2007ರ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ನಲ್ಲಿ ಗೆದ್ದ ಟೀಮ್ ಇಂಡಿಯಾದ ಆಟಗಾರನಾಗಿದ್ದರು.
ಆದ್ರೆ ಹರ್ಭಜನ್ ಸಿಂಗ್ ಅವರು 2015ರ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲಿಲ್ಲ. ಶ್ರೀಲಂಕಾ ವಿರುದ್ದ ಕೊನೆಯ ಟೆಸ್ಟ್, ದಕ್ಷಿಣ ಆಫ್ರಿಕಾ ವಿರುದ್ದ ಕೊನೆಯ ಏಕದಿನ ಮತ್ತು 2016ರಲ್ಲಿ ಯುಎಇ ವಿರುದ್ದ ಕೊನೆಯ ಟಿ-20 ಪಂದ್ಯವನ್ನು ಆಡಿದ್ದರು.
40ರ ಹರೆಯದ ಹರ್ಭಜನ್ ಸಿಂಗ್ ಭಾವುಕರಾಗಿ ವಿದಾಯದ ಸಂದೇಶವನ್ನು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಎಲ್ಲಾ ವಿಷಯಗಳು ಇಂದಿಗೆ ಕೊನೆಗೊಂಡಿದೆ. ನನ್ನ ಬದುಕಿನಲ್ಲಿ ಎಲ್ಲವೂ ನೀಡಿದ್ದ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ. 23 ವರ್ಷಗಳ ಸುದೀರ್ಘ ಪ್ರಯಾಣದ ಸುಂದರ ಮತ್ತು ಸ್ಮರಣೀಯವನ್ನಾಗಿಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು – ಹರ್ಭಜನ್ ಸಿಂಗ್.
ಒಟ್ಟಿನಲ್ಲಿ ಹರ್ಭಜನ್ ಸಿಂಗ್ ಅವರು ಭಾರತೀಯ ಕ್ರಿಕೆಟ್ ರಂಗದ ಧ್ರುವ ನಕ್ಷತ್ರ. ಕಪಿಲ್ ದೇವ್ ದಾಖಲೆಯನ್ನು ಅಳಿಸಿ ಹಾಕುವ ಸಾಧ್ಯತೆಗಳಿದ್ದವು. ಆದ್ರೆ ಅದಕ್ಕೆ ತಕ್ಕಂತೆ ಅವಕಾಶಗಳು ಸಿಕ್ಕಿರಲಿಲ್ಲ. ಏನೇ ಆಗ್ಲಿ ಹರ್ಭಜನ್ ಸಿಂಗ್ ಅವರ ಮುಂದಿನ ಬದುಕು ಸುಖಮಯವಾಗಿರಲಿ. ಆಲ್ ದಿ ಬೆಸ್ಟ್ ಭಜ್ಜಿ..!
ಹರ್ಭಜನ್ ಸಿಂಗ್ ಅವರ ಕ್ರಿಕೆಟ್ ಬದುಕಿನ ಅಂಕಿ ಅಂಶಗಳು..!
ಟೆಸ್ಟ್ ಕ್ರಿಕೆಟ್ – ಪಂದ್ಯ – 103, ವಿಕೆಟ್ – 417, ರನ್ -2226
ಏಕದಿನ ಕ್ರಿಕೆಟ್ – ಪಂದ್ಯ -236, ವಿಕೆಟ್ – 269, ರನ್ – 1237
ಟಿ-20 ಕ್ರಿಕೆಟ್ -ಪಂದ್ಯ – 28, ವಿಕೆಟ್ -25, ರನ್ – 108
ಐಪಿಎಲ್ ಕ್ರಿಕೆಟ್ -ಪಂದ್ಯ-163, ವಿಕೆಟ್ -150, ರನ್ – 833