ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಜಸ್ಪ್ರೀತ್ ಬುಮ್ರ, ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2022ರ ಐಪಿಎಲ್ನ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರ ಈ ಸಾಧನೆ ಮಾಡಿದರು. ಪಂದ್ಯದ 20ನೇ ಓವರ್ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದ ಬುಮ್ರ, ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ತಮ್ಮ 206ನೇ ಪಂದ್ಯದಲ್ಲಿ 250ನೇ ವಿಕೆಟ್ಗಳ ಗಡಿದಾಟಿದರು. ಅಲ್ಲದೇ ವಿಶ್ವ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 31ನೇ ಬೌಲರ್ ಎನಿಸಿದರು.

ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ವೇಗಿ ಜಸ್ಪ್ರೀತ್ ಬುಮ್ರ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ 67 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಗುಜರಾತ್ ಪರ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಟಿ20ಯಲ್ಲಿ ವಿಕೆಟ್ ಪಡೆದಿದ್ದಾರೆ. 2022ರ ಐಪಿಎಲ್ನಲ್ಲಿ ಬೌಲಿಂಗ್ನಲ್ಲಿ ನಿರೀಕ್ಷಿತ ಸಕ್ಸಸ್ ಕಾಣದ ಬುಮ್ರ, 13 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ.
T20ಯಲ್ಲಿ ಹೆಚ್ಚು ವಿಕೆಟ್ ಪಡೆದ ವೇಗಿಗಳು(ಭಾರತದ ಪರ)
ಜಸ್ಪ್ರೀತ್ ಬುಮ್ರ – 250
ಭುವನೇಶ್ವರ್ ಕುಮಾರ್ – 223
ಜಯದೇವ್ ಉನಾತ್ಕಟ್ – 201
ಆರ್. ವಿನಯ್ ಕುಮಾರ್ – 194
ಇರ್ಫಾನ್ ಪಠಾಣ್ – 173