ISSF World Cup: ಚಿನ್ನ ಗೆದ್ದ ಮಿರಾಜ್ ಅಹ್ಮದ್ ಖಾನ್ ಇತಿಹಾಸ
ಭಾರತದ ಶೂಟರ್ ಮಿರಾಜ್ ಅಹ್ಮದ್ ಖಾನ್ ಸೋಮವಾರ ಚಾಂಗ್ವಾನ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದು ದಾಖಲೆ ಬರೆದಿದ್ದಾರೆ. ಮಿರಾಜ್ ಚಿನ್ನದ ಪದಕ ಗೆದ್ದಿರುವ ಹಿನ್ನೆಲೆಯಲ್ಲಿ ದೇಶವಾಸಿಗಳು ಅಭಿನಂದಿಸುತ್ತಿದ್ದಾರೆ.
ಉತ್ತರ ಪ್ರದೇಶದ 46 ವರ್ಷದ ಮಿರಾಜ್ 40-ಶಾಟ್‌ಗಳ ಅಂತಿಮ ಸ್ಪರ್ಧೆಯಲ್ಲಿ ಅದ್ಭುತ 37 ಅಂಕ ಗಳಿಸಿದರು ಮತ್ತು ಕೊರಿಯಾದ ಮಿನ್ಸು ಕಿಮ್ ಮತ್ತು ಬ್ರಿಟನ್‌ನ ಬೆನ್ ಲೆವೆಲ್ಲಿನ್ ಅವರನ್ನು ಸೋಲಿಸಿದರು. ಮಿನ್ಸು 36 ಅಂಕಗಳೊಂದಿಗೆ ಬೆಳ್ಳಿ ಮತ್ತು ಬೆನ್ 26 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.

ಮಿರಾಜ್ ಅರ್ಹತಾ ಸುತ್ತಿನ ಎರಡು ದಿನಗಳಲ್ಲಿ 119/125 ಶೂಟ್ ಮಾಡಿದರು. ಅವರ ಮೊದಲ ವೈಯಕ್ತಿಕ ಚಿನ್ನಕ್ಕಾಗಿ ಐದು ಆಟಗಾರರ ಶೂಟ್-ಆಫ್ ಅನ್ನು ಪ್ರವೇಶಿಸಿದರು. ಎರಡು ಬಾರಿ ಒಲಿಂಪಿಯನ್, ಮಿರಾಜ್ ಈ ವರ್ಷ ಚಾಂಗ್ವಾನ್‌ನಲ್ಲಿ ಭಾರತೀಯ ತಂಡದ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ, ರಿಯೊ ಡಿ ಜನೈರೊದಲ್ಲಿ ನಡೆದ 2016 ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಇದಕ್ಕೂ ಮುನ್ನ ಅಂಜುಮ್ ಮೌದ್ಗಿಲ್, ಆಶಿ ಚೌಕ್ಸೆ ಮತ್ತು ಸಿಫ್ಟ್ ಕೌರ್ ಸಮ್ರಾ ಅವರು ಮಹಿಳೆಯರ 50 ಮೀಟರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಕಂಚಿನ ಪದಕ ಗೆದ್ದರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತೀಯರು ಆಸ್ಟ್ರಿಯಾದ ಶೀಲನ್ ವೀಬೆಲ್, ನಡಿನ್ ಉಂಗರ್‌ರಾಂಕ್ ಮತ್ತು ರೆಬೆಕಾ ಕೊಯೆಕ್ ಅವರನ್ನು 16-6 ರಿಂದ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದರು. ಈ ಸ್ಪರ್ಧೆಯಲ್ಲಿ ಭಾರತ 5 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕ ಸೇರಿದಂತೆ 13 ಪದಕಗಳನ್ನು ಗೆದ್ದಿದೆ.