ಮಾರ್ಚ್ ೨೭ರಿಂದ ೧೫ನೇ ಆವೃತ್ತಿಯ ಐಪಿಎಲ್ ಟೂರ್ನಿ ಶುರು – ಜೈ ಶಾ
೧೫ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ ಕೊನೆಯ ವಾರದಿಂದ ಮೇ ತಿಂಗಳ ತನಕ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.
ಐಪಿಎಲ್ ಫ್ರಾಂಚೈಸಿ ಮಾಲೀಕರ ಒಕ್ಕೋರಳ ಅಭಿಪ್ರಾಯದಂತೆ ೧೫ನೇ ಆವೃತ್ತಿಯ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯಲಿದೆ. ಹತ್ತು ತಂಡಗಳು ಭಾಗವಹಿಸುತ್ತಿವೆ. ಹೀಗಾಗಿ ಮಾರ್ಚ್ ಕೊನೆಯ ವಾರದಿಂದ ಮೇ ತಿಂಗಳಿನವರೆಗೆ ಟೂರ್ನಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸ್ಪಷ್ಟಪಡಿಸಿದ್ದಾರೆ.
ಇನ್ನು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಲಾಗುವುದು. ಭಾರತದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಟೂರ್ನಿಯನ್ನು ಆಯೋಜನೆ ಮಾಡಲಾಗುವುದು. ಆಟಗಾರರು ಮತ್ತು ಸಿಬ್ಬಂದಿಗಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಜೈ ಶಾ ಹೇಳಿದ್ರು.
ಇನ್ನು ಐಪಿಎಲ್ ಟೂರ್ನಿಯನ್ನು ಕೆಲವರು ಮಾರ್ಚ್ ೨೭ರಿಂದ ಆರಂಭಿಸಬೇಕು ಎಂದು ಹೇಳಿದ್ದಾರೆ. ಮತ್ತೆ ಕೆಲವರು ಏಪ್ರಿಲ್ ೨ರಿಂದ ಆರಂಭಿಸಬೇಕು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಮಾರ್ಚ್ ೨೭ರಿಂದ ಶುರುವಾಗಬಹುದು. ಯಾವುದಕ್ಕೂ ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜೈ ಶಾ ಹೇಳಿದ್ದಾರೆ.
ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ ೧೨ ಮತ್ತು ೧೩ ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಟೂರ್ನಿಯನ್ನು ಎಲ್ಲಿ ಆಯೋಜನೆ ಮಾಡುವುದು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಬಹುತೇಕ ಮುಂಬೈ ನ ಮೂರು ಅಂಗಣದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.
ಈ ಬಾರಿಯ ಐಪಿಎಲ್ ನಲ್ಲಿ ಹತ್ತು ತಂಡಗಳು ಭಾಗವಹಿಸಲಿವೆ. ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಹೆಚ್ಚುವರಿ ಎರಡು ತಂಡಗಳು ಸೇರಿಕೊಂಡಿವೆ. ಲಕ್ನೋ ತಂಡವನ್ನು ಕೆ.ಎಲ್. ರಾಹುಲ್ ಮುನ್ನಡೆಸಿದ್ರೆ, ಅಹಮದಾಬಾದ್ ತಂಡವನ್ನು ಹಾರ್ದಿಕ್ ಪಾಂಡ್ಯ ಸಾರಥ್ಯ ವಹಿಸಲಿದ್ದಾರೆ.