IPL ಮೋಡಿಯೇ ಅಂತಹದ್ದು. ಯಾರು ಯಾವುದೇ ಹುದ್ದೆಯಲ್ಲಿ ಇರಲಿ.. ಐಪಿಎಲ್ ಕಡೆಗೆ ಒಂದು ಸೆಳೆತ ಇದ್ದೇ ಇರುತ್ತದೆ. ಇದಕ್ಕೆ ಉದಾಹರಣೆಯೂ ಈಗ ಸಿಕ್ಕಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುವ ಆಟಗಾರರ ಮೆಗಾಹರಾಜಿನಲ್ಲಿ ಪಶ್ಚಿಮ ಬಂಗಾಳದ (West Bengal) ಕ್ರೀಡಾ ಸಚಿವರೇ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಅರೆ..! ಇದೇನು ಅಂತ ಗಾಬರಿ ಆಗಬೇಡಿ. ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಪಶ್ಚಿಮ ಬಂಗಾಳದ ರಣಜಿ ಆಟಗಾರ ಮನೋಜ್ ತಿವಾರಿ (Manoj Tiwary) ಮಮತಾ ಬ್ಯಾನರ್ಜಿ (Mamata Banerji) ಸರಕಾರದಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮನೋಜ್ ತಿವಾರಿ ಶಿಬ್ಪುರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಮಂತ್ರಿಯಾದರೂ ತಿವಾರಿ ಕ್ರಿಕೆಟ್ ಆಡುವುದನ್ನು ಬಿಟ್ಟಿಲ್ಲ. ಹೀಗಾಗಿ ಐಪಿಎಲ್ ಆಟಗಾರರ ಹರಾಜಿನಲ್ಲಿ ತಿವಾರಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಪರವೂ ಆಡಿರುವ ಮನೋಜ್ ತಿವಾರಿ ತಮ್ಮ ಮೂಲ ಬೆಲೆಯನ್ನು ಮನೋಜ್ ತಿವಾರಿ 50 ಲಕ್ಷ ರೂಪಾಯಿ ಎಂದು ಘೋಷಿಸಿದ್ದಾರೆ. ತಿವಾರಿ ಈ ಹಿಂದೆ ಕೆಕೆಆರ್, ರೈಸಿಂಗ್ ಪುಣೆ ಜೈಂಟ್ಸ್ ಮತ್ತು ಕಿಂಗ್ಸ್ ಪಂಬಾಬ್ ತಂಡದಲ್ಲಿ ಆಡಿದ್ದರು. ಕಳೆದ ಬಾರಿಯ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದರು.
ಮನೋಜ್ ತಿವಾರಿ 2020 ರಲ್ಲಿ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧ ಬಂಗಾಳದ ಪರವಾಗಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ಈ ಬಾರಿಯೂ ತಿವಾರಿ ರಣಜಿ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದ ಇದೀಗ ಟೂರ್ನಿಯನ್ನು ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ನಡೆಯುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರಿಗೆ ಬಿಡ್ ಮಾಡಲಿವೆ. ಸುಮಾರು 227 ಆಟಗಾರರು ಬಿಕರಿಯಾಗುವ ನಿರೀಕ್ಷೆ ಇದೆ.