ipl 2022 – Hardik Pandya ನಾಯಕತ್ವ ತತ್ವಶಾಸ್ತದ ಬಗ್ಗೆ ಹಾರ್ದಿಕ್ ಪಾಂಡ್ಯ ಹೇಳೋದು ಹೀಗೆ…?
ಹಾರ್ದಿಕ್ ಪಾಂಡ್ಯ.. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಹಮದಾಬಾದ್ ತಂಡದ ಸಾರಥಿ. ಈ ಹಿಂದೆ ಟೀಮ್ ಇಂಡಿಯಾ, ಬರೋಡಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಆಗಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಅನ್ನೋದು ಹೊಸ ಜವಾಬ್ದಾರಿ. ಒಂಥರಾ ವಿಚಿತ್ರ ವ್ಯಕ್ತಿತ್ವವನ್ನು ಹೊಂದಿರುವ ಹಾರ್ದಿಕ್ ಪಾಂಡ್ಯ ಅವರು ನಾಯಕನಾಗಿ ತಂಡವನ್ನು ಯಾವ ರೀತಿ ಮುನ್ನಡೆಸುತ್ತಾರೆ ಅನ್ನೋ ಕುತೂಹಲವೂ ಇದೆ.
ಈ ಹಿಂದೆ ಬರೋಡಾ 16ವಯೋಮಿತಿಯ ತಂಡವನ್ನು ಮುನ್ನಡೆಸಿರುವುದನ್ನು ಬಿಟ್ರೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಯಾವುದೇ ಅನುಭವ ಇಲ್ಲ. ಆದರೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವನ್ನು ಹೊಂದಿದ್ದಾರೆ.
ಅದಕ್ಕೆ ಕಾರಣ ತನ್ನ ಗುರು ಮಹೇಂದ್ರ ಸಿಂಗ್ ಧೋನಿ. ಮಹೇಂದ್ರ ಸಿಂಗ್ ಧೋನಿಯ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ನಾಯಕತ್ವದ ವಿಚಾರದಲ್ಲಿ ಧೋನಿಯ ಹಾದಿಯನ್ನೇ ಅನುಸರಿಸುತ್ತಾರೆ.
ಒಬ್ಬ ಆಟಗಾರ ಯಶಸ್ಸಿನ ಹಾದಿಯಲ್ಲಿದ್ದಾಗ ಆತನಿಗೆ ಯಾರ ಅಗತ್ಯವೂ ಇರಲ್ಲ. ಆದ್ರೆ ಕೆಳಗೆ ಬಿದ್ದಾಗ ಆತನಿಗೆ ನೆರವಿನ ಅಗತ್ಯವಿದೆ. ಹಾಗೇ ತಂಡಕ್ಕೆ ತನ್ನ ಅಗತ್ಯ ಇದ್ದಾಗ ನಾನು ನೆರವಿಗೆ ಧಾವಿಸುತ್ತೇನೆ. ಆಟದಲ್ಲಿ ಪ್ರತಿಯೊಬ್ಬರಿಗೂ ಕೆಟ್ಟ ದಿನ ಅಂತ ಇರುತ್ತೆ. ಆಗ ಅವರಿಗೆ ಸಹಾಯ ಮಾಡಬೇಕಾಗುತ್ತದೆ ಎಂಬುದು ಹಾರ್ದಿಕ್ ಪಾಂಡ್ಯ ಅವರ ಅಭಿಮತವಾಗಿದೆ.
ತಂಡದ ನಾಯಕನಾಗಿ ನನ್ನ ತತ್ವ ಶಾಸ್ತ್ರ ತುಂಬಾನೇ ಸುಲಭವಾಗಿದೆ. ಒಬ್ಬ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಿದ್ರೆ ನಾನು ನಾಯಕನಾಗಿ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ಕೆಟ್ಟ ಪ್ರದರ್ಶನ ನೀಡಿದಾಗ ಒಬ್ಬ ವ್ಯಕ್ತಿಯಾಗಿ ಆತನ ನೆರವಿಗೆ ನಾನು ಧಾವಿಸುತ್ತೇನೆ. ಯಾರಿಗೇ ಆಗಲಿ, ನನ್ನ ಸಹಾಯ ಬೇಕು ಅಂದಾಗ ನಾನು ಅಲ್ಲಿರುತ್ತೇನೆ ಎಂಬುದು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ತತ್ವಶಾಸ್ತ್ರವಾಗಿದೆ.
ಅಂದ ಹಾಗೇ ಹಾರ್ದಿಕ್ ಪಾಂಡ್ಯ ಅವರು, ಧೋನಿ, ವಿರಾಟ್ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿದ್ದಾರೆ. ಹೀಗಾಗಿ ಮೂವರು ನಾಯಕರ ಕೆಲವೊಂದು ಗುಣಗಳನ್ನು ಅಳವಡಿಸಿಕೊಳ್ಳಲಿದ್ದಾರೆ.
ಧೋನಿಯವರ ಶಾಂತ ಚಿತ್ತ ವ್ಯಕ್ತಿತ್ವ, ವಿರಾಟ್ ಕೊಹ್ಲಿಯವರ ಆಕ್ರಮಣಕಾರಿ ಪ್ರವೃತ್ತಿ ಮತ್ತು ಆಟಗಾರರಿಗೆ ಸ್ವಾತಂತ್ರ್ಯ ನೀಡುವ ರೋಹಿತ್ ಶರ್ಮಾ ಅವರ ಗುಣಗಳನ್ನು ನಾನು ಮೈಗೂಡಿಸಿಕೊಳ್ಳಲಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇನ್ನು ಅಹಮದಾಬಾದ್ ತಂಡದ ಹೇಗಿರಬೇಕು. ತಂಡದಲ್ಲಿ ಎಂಥ ಆಟಗಾರರು ಇರಬೇಕು ಎಂಬುದರ ಬಗ್ಗೆಯೂ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ನೀವು ಎಷ್ಟೇ ಸ್ಫೋಟಕ ಬ್ಯಾಟ್ಸ್ ಮೆನ್ ಆಗಿರಬಹುದು. ಹಾಗೇ ಮಾರಕ ಬೌಲರ್ ಆಗಿರಬಹುದು. ಆದ್ರೆ ಪರಿಸ್ಥಿತಿಗೆ ತಕ್ಕಂತೆ ಆಡುವಂತಹ ಆಟಗಾರರು ತಂಡದಲ್ಲಿ ಇರಬೇಕು. ನೀವು ಪಂದ್ಯವನ್ನು ಮುಗಿಸಿದಾಗ ಯಾರು ಗೆದ್ರು ಎಂಬುದು ಗೊತ್ತಾಗುತ್ತದೆ. ಆದ್ರೆ ಸಣ್ಣ ಸಣ್ಣ ಕ್ಷಣಗಳು ಟಿ-20 ಪಂದ್ಯಗಳಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿರುತ್ತವೆ ಅಂತಾರೆ ಹಾರ್ದಿಕ್ ಪಾಂಡ್ಯ.
ಇನ್ನು ತಂಡದ ರಣ ತಂತ್ರದ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆಯುವ ಬಗ್ಗೆ ಯಾವುದೇ ಯೋಚನೆಗಳು ಇಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಬಹುದು ಎಂದಷ್ಟೇ ಹೇಳಿದ್ರು.
ಐಪಿಎಲ್ ನ ನಾಯಕತ್ವ ನನಗೆ ಹೊಸ ಸವಾಲು. ಹಾಗಂತ ಟೀಮ್ ಇಂಡಿಯಾದ ನಾಯಕತ್ವದ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ಅದರ ಬಗ್ಗೆ ಯೋಚನೆ ಮಾಡೋದು ಕೂಡ ಸರಿಯಲ್ಲ. ಟೀಮ್ ಇಂಡಿಯಾದ ನಾಯಕತ್ವವನ್ನು ಹುಡುಕಿಕೊಂಡು ಹೋಗುವುದಿಲ್ಲ. ಅದು ಬಂದಾಗ ನೊಡೋಣ ಎಂದ ಹಾರ್ದಿಕ್ ಪಾಂಡ್ಯ, ನಾಯಕತ್ವದ ಒತ್ತಡವಂತೂ ಇದ್ದೇ ಇದೆ. ಇದೊಂದು ನನಗೆ ಉತ್ತಮವಾಗಿ ವೇದಿಕೆಯಾಗಿದೆ. ಹಾಗೇ ಅಷ್ಟೇ ಸವಾಲುಗಳು ಇವೆ. ಹಾಗಂತ ಗೆಲ್ಲುವ ನಿರೀಕ್ಷೆಗಳಿವೆ ಎಂದು ಹೇಳುತ್ತಿಲ್ಲ. ಯಾಕಂದ್ರೆ ಎಲ್ಲರೂ ಗೆಲುವನ್ನೇ ಎದುರು ನೋಡುತ್ತಿರುತ್ತಾರೆ ಅಂತ ಹಾರ್ದಿಕ್ ಪಾಂಡ್ಯ ಹೇಳುತ್ತಾರೆ.
ಒಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಅವರು ಹುಡುಗಾಟದ ಆಡವನ್ನು ಬಿಟ್ಟು ಈ ಬಾರಿಯ ಐಪಿಎಲ್ ನಲ್ಲಿ ಜವಾಬ್ದಾರಿಯುತವಾಗಿ ಆಡುವ ಇರಾದೆಯನ್ನು ಹೊಂದಿದ್ದಾರೆ.