ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾರತೀಯ ಆಟಗಾರರಷ್ಟೇ ವಿದೇಶಿ ಆಟಗಾರರು ಕೂಡ ಹೆಸರು ಮಾಡಿದ್ದಾರೆ. ಟಿ20 ಕ್ರಿಕೆಟ್ನ ಯೂನಿವರ್ಸಲ್ ಬಾಸ್ ಕ್ರಿಸ್ಗೇಲ್ಗೆ ಪುನರ್ಜನ್ಮ ನೀಡಿದ್ದೇ ಐಪಿಎಲ್. ಎಬಿಡಿ ವಿಲಿಯರ್ಸ್ ಅವರ ತಾಕತ್ತು ಗೊತ್ತಾಗಿದ್ದೇ ಐಪಿಎಲ್ ಮೂಲಕ. ಆಸ್ಟ್ರೇಲಿಯನ್ನರು, ಕೆರಿಬಿಬಿಯನ್ನರು, ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಇಲ್ಲದ ಐಪಿಎಲ್ ಅನ್ನು ಊಹಿಸಿಕೊಳ್ಳಲು ಕೂಡ ಕಷ್ಟವೇ. ಈಗ ಕೆರಿಬಿಯನ್ ಆಟಗಾರ ಡ್ವೈನ್ ಬ್ರಾವೋ ಕ್ರಿಸ್ ಗೇಲ್ ಮತ್ತು ಎಬಿಡಿ ವಿಲಿಯರ್ಸ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
ಐಪಿಎಲ್ನ ಎಲ್ಲಾ 15 ಸೀಸನ್ನಲ್ಲಿ ಕಾಣಿಸಿಕೊಂಡ ವಿದೇಶಿ ಆಟಗಾರ ಅನ್ನುವ ಖ್ಯಾತಿ ಪಡೆಯಲು ಬ್ರಾವೋ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬ್ರಾವೋ 2008ರಿಂದಲೂ ಐಪಿಎಲ್ ಆಡುತ್ತಿದ್ದಾರೆ. ಮೊದಲು ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿದ್ದ ಬ್ರಾವೋ ಆಮೇಲೆ ಚೆನ್ನೈ ತಂಡದ ಖಾಯಂ ಸದಸ್ಯರಾಗಿದ್ದರು. ಈಗ ಐಪಿಎಲ್ ಆಟಗಾರರ ಹರಾಜಿನಲ್ಲಿ ಹೆಸರು ನೋಂದಾಯಿಸಿರುವ ಬ್ರಾವೋ, ಉತ್ತಮ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆಗಳಿವೆ. ಒಂದು ವೇಳೆ ಬ್ರಾವೋ ಯಾವುದಾದರು ಒಂದು ಫ್ರಾಂಚೈಸಿ ಪಾಲಾದರೆ ಎಲ್ಲಾ 15 ಸೀಸನ್ಗಳನ್ನು ಆಡಿದ ಮೊದಲ ವಿದೇಶಿ ಆಟಗಾರ ಅನ್ನುವ ಖ್ಯಾತಿ ಪಡೆದುಕೊಳ್ಳಲಿದ್ದಾರೆ.
ಐಪಿಎಲ್ ಎಲ್ಲಾ ಆವೃತ್ತಿಗಳನ್ನು ಆಡಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್ ಮತ್ತು ಡ್ವೈನ್ ಬ್ರಾವೋ ಮಾತ್ರ ಇದ್ದಾರೆ. ಈ ಬಾರಿ ಹರಾಜಿನಲ್ಲಿ ಗೇಲ್ ಮತ್ತು ಎಬಿಡಿs ಹೆಸರು ನೋಂದಾಯಿಸಿಲ್ಲ. ಹೀಗಾಗಿ ಬ್ರಾವೋ ಗೇಲ್ ಮತ್ತು ಎಬಿಡಿ ದಾಖಲೆ ಮುರಿಯುವುದು ಬಹುತೇಕ ಖಚಿತವಾಗಿದೆ. ಬ್ರಾವೋ 151 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 1537 ರನ್ ಮತ್ತು 167 ವಿಕೆಟ್ ಪಡೆದಿದ್ದಾರೆ.