ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ʼಚೇಸ್ ಕಿಂಗ್ʼ ವಿರಾಟ್ ಕೊಹ್ಲಿ(73) ಬೊಂಬಾಟ್ ಬ್ಯಾಟಿಂಗ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(40*) ಸ್ಪೋಟಕ ಆಟದ ನೆರವಿನಿಂದ ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ 15ನೇ ಆವೃತ್ತಿಯ ಪ್ಲೇ-ಆಫ್ ರೇಸ್ನಲ್ಲಿ ಜೀವಂತವಾಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್, ಹಾರ್ದಿಕ್ ಪಾಂಡ್ಯ(62*), ಡೇವಿಡ್ ಮಿಲ್ಲರ್(34) ಅವರ ಜವಾಬ್ದಾರಿಯ ಆಟದಿಂದ 20 ಓವರ್ಗಳಲ್ಲಿ 168/5 ರನ್ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ವಿರಾಟ್ ಕೊಹ್ಲಿ(73) ಹಾಗೂ ಡೇವಿಡ್ ಮಿಲ್ಲರ್(44) ಅವರ ಶತಕದ ಜೊತೆಯಾಟದಿಂದ 18.4 ಓವರ್ಗಳಲ್ಲಿ 170/2 ರನ್ಗಳಿಸುವ ಮೂಲಕ ಗೆಲುವಿನ ನಗೆಬೀರಿತು.
![IPL 2022: ʼಚೇಸ್ ಕಿಂಗ್ʼ ಕೊಹ್ಲಿ ಬೊಂಬಾಟ್ ಆಟ: ಗುಜರಾತ್ ಮಣಿಸಿ ಪ್ಲೇ-ಆಫ್ ರೇಸ್ನಲ್ಲಿ ಉಳಿದ ಆರ್ಸಿಬಿ 3 MILLER HARDIK](http://sportskarnataka.com/wp-content/uploads/2022/05/MILLER-HARDIK.jpg)
ಹಾರ್ದಿಕ್-ಮಿಲ್ಲರ್ ಆಸರೆ:
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್(1) ಬಹುಬೇಗನೆ ಔಟಾದರು. ವೃದ್ಧಿಮಾನ್ ಸಾಹ(31) ಉಪಯುಕ್ತ ರನ್ಗಳಿಸಿ ಹೊರ ನಡೆದರೆ, ಮ್ಯಾಥ್ಯೂ ವೇಡ್(16) ಹೆಚ್ಚು ರನ್ ಕಲೆಹಾಕುವಲ್ಲಿ ಎಡವಿದರು. ಈ ಹಂತದಲ್ಲಿ ಜೊತೆಯಾದ ನಾಯಕ ಹಾರ್ದಿಕ್ ಪಾಂಡ್ಯ 62*(47) ಹಾಗೂ ಡೇವಿಡ್ ಮಿಲ್ಲರ್ 34(25) 4ನೇ ವಿಕೆಟ್ಗೆ 61(47) ರನ್ಗಳಿಸಿ ತಂಡಕ್ಕೆ ಆಸರೆಯಾದರು. ಮಿಲ್ಲರ್ ಔಟಾದ ನಂತರವು ಜವಾಬ್ದಾರಿಯ ಆಟವಾಡಿದ ಹಾರ್ದಿಕ್, ಪ್ರಸಕ್ತ ಐಪಿಎಲ್ನಲ್ಲಿ 4ನೇ ಅರ್ಧಶತಕ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೇವಾಟಿಯಾ(2) ಬ್ಯಾಟಿಂಗ್ ವೈಫಲ್ಯ ಕಂಡರೆ. ರಶೀದ್ ಖಾನ್ 19*(6) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆರ್ಸಿಬಿ ಪರ ಹೇಜಲ್ವುಡ್(2/39), ಹಸರಂಗ(1/25) ಹಾಗೂ ಮ್ಯಾಕ್ಸ್ವೆಲ್(1/28) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
![IPL 2022: ʼಚೇಸ್ ಕಿಂಗ್ʼ ಕೊಹ್ಲಿ ಬೊಂಬಾಟ್ ಆಟ: ಗುಜರಾತ್ ಮಣಿಸಿ ಪ್ಲೇ-ಆಫ್ ರೇಸ್ನಲ್ಲಿ ಉಳಿದ ಆರ್ಸಿಬಿ 4 VIRAT](http://sportskarnataka.com/wp-content/uploads/2022/05/VIRAT.jpg)
ʼಚೇಸ್ ಕಿಂಗ್ʼ ಆರ್ಭಟ:
ಗುಜರಾತ್ ಟೈಟನ್ಸ್ ನೀಡಿದ 169 ರನ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಭರ್ಜರಿ ಆರಂಭ ಪಡೆಯಿತು. ಓಪನರ್ಗಳಾಗಿ ಬಂದ ಫಾಫ್ ಡುಪ್ಲೆಸ್ಸಿ 44(38) ಹಾಗೂ ವಿರಾಟ್ ಕೊಹ್ಲಿ(73) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಗುಜರಾತ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ ಮೊದಲ ವಿಕೆಟ್ಗೆ 115 ರನ್ಗಳ ಅದ್ಭುತ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಡುಪ್ಲೆಸ್ಸಿ 44 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ. ಈ ಸೀಸನ್ನಲ್ಲಿ ಫಾರ್ಮ್ ಕೊರತೆ ಎದುರಿಸುತ್ತಿದ್ದ ಕೊಹ್ಲಿ, 73 ರನ್(54 ಬಾಲ್, 8 ಬೌಂಡರಿ, 2 ಸಿಕ್ಸ್) ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು.
![IPL 2022: ʼಚೇಸ್ ಕಿಂಗ್ʼ ಕೊಹ್ಲಿ ಬೊಂಬಾಟ್ ಆಟ: ಗುಜರಾತ್ ಮಣಿಸಿ ಪ್ಲೇ-ಆಫ್ ರೇಸ್ನಲ್ಲಿ ಉಳಿದ ಆರ್ಸಿಬಿ 5 MAXWELL](http://sportskarnataka.com/wp-content/uploads/2022/05/MAXWELL.jpg)
ʼಮ್ಯಾಕ್ಸಿʼ ಸ್ಪೋಟಕ ಆಟ:
ಫಾಫ್ ಡುಪ್ಲೆಸ್ಸಿ ವಿಕೆಟ್ ಪತನದ ನಂತರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ 40* ರನ್(18 ಬಾಲ್, 5 ಬೌಂಡರಿ, 2 ಸಿಕ್ಸ್) ಸ್ಪೋಟಕ ಆಟವಾಡಿದರು. ಇನ್ನಿಂಗ್ಸ್ನ ಮೊದಲ ಬಾಲ್ನಿಂದಲೇ ಬಿರುಸಿನ ಆಟವಾಡುವ ಮುನ್ಸೂಚನೆ ನೀಡಿದ ಗ್ಲೆನ್ ಮ್ಯಾಕ್ಸ್ವೆಲ್, ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಗುಜರಾತ್ ಟೈಟನ್ಸ್ ಪರ ರಶೀದ್ ಖಾನ್(2/32) ವಿಕೆಟ್ ಪಡೆದರು.
![IPL 2022: ʼಚೇಸ್ ಕಿಂಗ್ʼ ಕೊಹ್ಲಿ ಬೊಂಬಾಟ್ ಆಟ: ಗುಜರಾತ್ ಮಣಿಸಿ ಪ್ಲೇ-ಆಫ್ ರೇಸ್ನಲ್ಲಿ ಉಳಿದ ಆರ್ಸಿಬಿ 6 RCB IPL 2022](http://sportskarnataka.com/wp-content/uploads/2022/05/RCB-IPL-2022.jpg)
ಪ್ಲೇ-ಆಫ್ ಆಸೆ ಜೀವಂತ:
ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ಸಿಬಿ, ಗುಜರಾತ್ ವಿರುದ್ಧ ಗೆಲ್ಲುವ ಮೂಲಕ ಪ್ಲೇ-ಆಫ್ ರೇಸ್ನಲ್ಲಿ ಜೀವಂತ ಉಳಿದಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 16 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿದೆ. ಆದರೆ ಬೆಂಗಳೂರು ತಂಡ ಪ್ಲೇ-ಆಫ್ ಪ್ರವೇಶಿಸಬೇಕಾದರೆ ಮೇ 21ರಂದು ನಡೆಯುವ ಮುಂಬೈ ಇಂಡಿಯನ್ಸ್ v ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಿದೆ. ಈ ಪಂದ್ಯದಲ್ಲಿ ಡೆಲ್ಲಿ ಸೋತರೆ ಆರ್ಸಿಬಿ ಪ್ಲೇ-ಆಫ್ ಹಾದಿ ಸುಗಮವಾಗಲಿದೆ.