ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ, ತಮ್ಮ ಫ್ಯಾನ್ಸ್ ಹಾಗೂ ಟೀಂ ಮ್ಯಾನೇಜ್ಮೆಂಟ್ಗೆ ಪ್ರೀತಿ ತುಂಬಿದ ಸಾಲುಗಳನ್ನ ಬರೆಯುವ ಮೂಲಕ ಭಾವನಾತ್ಮಕ ಕೃತಜ್ಞತೆ ಸಲ್ಲಿಸಿದ್ದಾರೆ.
15ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಆರ್ಸಿಬಿ ಶುಕ್ರವಾರ ನಡೆದ ಕ್ವಾಲಿಫೈಯರ್-2ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು 2022ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿತು. ಸೋಲಿನ ಬೇಸರದ ನಡುವೆವಯೂ ಫ್ಯಾನ್ಸ್ಗಳು ಹಾಗೂ ತಂಡದ ಮ್ಯಾನೇಜ್ಮೆಂಟ್ ಮರೆಯದ ವಿರಾಟ್ ಕೊಹ್ಲಿ, ಹೃದಯ ತುಂಬಿದ ಸಾಲುಗಳೊಂದಿಗೆ ಇಬ್ಬರಿಗೂ ಪ್ರೀತಿಯ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದಕ್ಕಾಗಿ ಸೋಶಿಯಲ್ ಮೀಡಿಯಾವನ್ನು ವೇದಿಕೆಯಾಗಿ ಬಳಸಿಕೊಂಡಿರುವ ಕೊಹ್ಲಿ, 2022ರ ಐಪಿಎಲ್ ಆವೃತ್ತಿಯ ಕೆಲವು ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ.
“ಕೆಲವೊಮ್ಮೆ ನೀವು ಗೆಲ್ಲುತ್ತೀರಿ, ಮತ್ತು ಕೆಲವೊಮ್ಮೆ ಗೆಲ್ಲುವುದಿಲ್ಲ, ಆದರೆ 12ನೇ ಆರ್ಮಿ, ನೀವು ನಿಜಕ್ಕೂ ಅದ್ಭುತ, ನಮ್ಮ ಅಭಿಮಾನದ ಉದ್ದಕ್ಕೂ ಪ್ರತಿಬಾರಿ ನಮ್ಮನ್ನು ಬೆಂಬಲಿಸಿದ್ದೀರಿ, ನೀವು ಕ್ರಿಕೆಟನ್ನು ವಿಶೇಷವಾಗಿಸಿದ್ದೀರಿ. ಅಲ್ಲದೇ ಕಲಿಕೆ ಎಂದಿಗೂ ನಿಲ್ಲುವುದಿಲ್ಲ” ಎಂದು ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ “ಸೀಸನ್ ಉದ್ದಕ್ಕೂ ಸಹಕರಿಸಿದ ಟೀಮ್ ಮ್ಯಾನೇಜ್ಮೆಂಟ್, ಸಪೋರ್ಟ್ ಸ್ಟಾಫ್ ಹಾಗೂ ಫ್ರಾಂಚೈಸಿ ಭಾಗವಾಗಿರುವ ಎಲ್ಲರಿಗೂ ದೊಡ್ಡ ಧನ್ಯವಾದಗಳು. ಮುಂದಿನ ಸೀಸನ್ನಲ್ಲಿ ಭೇಟಿಯಾಗೋಣ” ಎಂದು ಟ್ವೀಟ್ ಮಾಡಿದ್ದಾರೆ.
IPL 2022 ಕೊಹ್ಲಿಗೆ ನಿರಾಸೆ:
ಈ ಬಾರಿಯ ಐಪಿಎಲ್ ಆವೃತ್ತಿ ವಿರಾಟ್ ಕೊಹ್ಲಿ ಪಾಲಿಗೆ ನಿರಾಸೆ ಮೂಡಿಸಿದ ಆವೃತ್ತಿಯಾಗಿದೆ. ಸೀಸನ್ ಆರಂಭದಿಂದಲೂ ಫಾರ್ಮ್ ವೈಫಲ್ಯ ಅನುಭವಿಸಿದ ಕೊಹ್ಲಿ, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆಡಿದ 16 ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 341 ರನ್ಗಳು ಮಾತ್ರ. 22.73ರ ಸರಾಸರಿ ಹಾಗೂ 115.78ರ ಸ್ಟ್ರೈಕ್ ರೇಟ್ ಹೊಂದಿದ್ದ ವಿರಾಟ್, ಬ್ಯಾಟ್ನಿಂದ ಮೂಡಿದ್ದು ಎರಡು ಅರ್ಧಶತಕಗಳು ಮಾತ್ರ.