ದೇಶಿಯ ಕ್ರಿಕೆಟ್ನಲ್ಲಿ ಕಮಾಲ್ ಮಾಡಿದ್ದರೂ, ಕಳೆದ ಎರಡು ಐಪಿಎಲ್ ಸೀಸನ್ಗಳಲ್ಲಿ ತೆರೆಹಿಂದೆ ಕಸರತ್ತು ನಡೆಸುತ್ತಿದ್ದ ಯುವ ವೇಗದ ಬೌಲರ್ ವೈಭವ್ ಅರೋರ, ಶ್ರೀಮಂತ ಕ್ರಿಕೆಟ್ಗೆ ಲೀಗ್ಗೆ ʼವೈಭವʼದ ಎಂಟ್ರಿಕೊಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದ ವೈಭವ್ ಅರೋರ, ಮೊದಲ ಪಂದ್ಯದಲ್ಲೇ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಯುವ ಬೌಲರ್ಗೆ ಐಪಿಎಲ್ ಅನುಭವ ಹೊಸದೇನಲ್ಲ. ಈ ಹಿಂದಿನ ಎರಡು ಸೀಸನ್ನಲ್ಲಿ ತೆರೆಹಿಂದೆ ಕಾಣಿಸಿಕೊಂಡಿದ್ದ ಅರೋರ, ಕಡೆಗೂ ಪಂಜಾಬ್ ತಂಡದಲ್ಲಿ ಆಡುವ ಅವಕಾಶ ಪಡೆದರು. ಮೊದಲ ಪಂದ್ಯದಲ್ಲೇ ಮೋಡಿ ಮಾಡಿದ ಅರೋರ, ಪಂಜಾಬ್ ಕಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
2020ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನೆಟ್ ಬೌಲರ್ ಆಗಿ ವೈಭವ್ ಅರೋರ ಕಾಣಿಸಿಕೊಂಡಿದ್ದರು. ಯುವ ವೇಗದ ಬೌಲರ್ನಲ್ಲಿರುವ ಟ್ಯಾಲೆಂಟ್ ಗುರುತಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ 2021ರಲ್ಲಿ 20 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. ಆದರೆ ತಂಡದಲ್ಲಿ ಆಡುವ ಅವಕಾಶ ಪಡೆಯದ ಈ ಆಟಗಾರ ಕೇವಲ ಬೆಂಚ್ ಕಾಯಬೇಕಾಯಿತು. ಈ ಬಾರಿ ಮೆಗಾ ಹರಾಜಿನಲ್ಲಿ 2 ಕೋಟಿ ಮೊತ್ತಕ್ಕೆ ಪಂಬಾಜ್ ಕಿಂಗ್ಸ್ ತಂಡಕ್ಕೆ ಮರಳಿದಿದ್ದ ಅರೋರ, ಮೊದಲ ಅವಕಾಶಕ್ಕಾಗಿ ಕಾಯುತ್ತಿದ್ದರು.
ಸತತ ಎರಡು ಸೀಸನ್ಗಳಿಂದ ತೆರೆಹಿಂದೆ ಕಸರತ್ತು ನಡೆಸುತ್ತಿದ್ದ ಯುವ ವೇಗಿಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಅವಕಾಶ ಒಲಿದು ಬಂತು. ಈ ಅವಕಾಶ ಬಳಸಿಕೊಂಡ ಅರೋರ, ಚೊಚ್ಚಲ ಪಂದ್ಯದಲ್ಲೇ 2 ವಿಕೆಟ್ ಪಡೆದು ಮಿಂಚಿದರು. ಚೆನ್ನೈ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾದ ರಾಬಿನ್ ಉತ್ತಪ್ಪ ಹಾಗೂ ಮೊಯಿನ್ ಅಲಿ ವಿಕೆಟ್ ಪಡೆದರು. ಅಲ್ಲದೇ 4 ಓವರ್ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದ ಅರೋರ, ಗಮನಾರ್ಹ ಪ್ರದರ್ಶನ ನೀಡಿದರು.
ದೇಶಿ ಕ್ರಿಕೆಟ್ನಲ್ಲಿ ಮಿಂಚು:
ಹರಿಯಾಣ ಮೂಲದ ವೈಭವ್ ಅರೋರ, 2019-20ರಲ್ಲಿ ಹಿಮಾಚಲ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 2021ರ ರಣಜಿ ಟ್ರೋಫಿಯಲ್ಲಿ 12 ಇನ್ನಿಂಗ್ಸ್ನಲ್ಲಿ 18.6ರ ಸರಾಸರಿಯೊಂದಿಗೆ 29 ವಿಕೆಟ್ ಪಡೆದಿದ್ದ ಅರೋರ, ಹಿಮಾಚಲ ಪ್ರದೇಶ ಪರ ಅತ್ಯಧಿಕ ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಸೈಯದ್ ಮುಸ್ತಾಕ್ ಅಲಿ ಹಾಗೂ ವಿಜಯ್ ಹಜಾ಼ರೆ ಟ್ರೋಫಿಯಲ್ಲೂ ಅಬ್ಬರಿಸಿದ್ದ ವೈಭವ್ ಅರೋರ, ಐಪಿಎಲ್ ಮೆಗಾ ಹರಾಜಿನಲ್ಲಿ 2 ಕೋಟಿ ಪಡೆದು ಪಂಜಾಬ್ ಕಿಂಗ್ಸ್ ಸೇರಿದ್ದರು.