ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ನ್ಯೂಜಿ಼ಲೆಂಡ್ ತಂಡದ ಸ್ಟಾರ್ ಆಟಗಾರ ರಾಸ್ ಟೇಲರ್ ಇಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಪಂದ್ಯವಾಡಿದರು.
ಕ್ರಿಕೆಟ್ ಲೋಕದಲ್ಲಿ ತಮ್ಮಅತ್ಯುತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ರಾಸ್ ಟೇಲರ್, ತವರಿನಲ್ಲಿ ನಡೆಯುವ ನೆದರ್ಲೆಂಡ್ ವಿರುದ್ಧದ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ 2021ರ ಡಿಸೆಂಬರ್‌ನಲ್ಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ತವರಿನಲ್ಲಿ ನಡೆದ ನೆದರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರಾಸ್ ಟೇಲರ್, ತಮ್ಮ ಕಡೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡರು.
ನ್ಯೂಜಿ಼ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ರಾಸ್ ಟೇಲರ್ ತಮ್ಮದೇ ಛಾಪು ಮೂಡಿಸಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸು ಕಂಡಿರುವ ಬಲಗೈ ಬ್ಯಾಟ್ಸ್‌ಮನ್, ಕಿವೀಸ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದರು. ವಿಶ್ವದ ಎಲ್ಲಾ ತಂಡಗಳ ವಿರುದ್ಧವೂ ಬ್ಯಾಟಿಂಗ್‌ನಲ್ಲಿ ಮಿಂಚಿರುವ ಟೇಲರ್, ಹಲವು ಪಂದ್ಯಗಳಲ್ಲಿ ಕಿವೀಸ್ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಟೇಲರ್‌ಗೆ 450ನೇ ಪಂದ್ಯ:
ಮೂರು ಮಾದರಿ ಕ್ರಿಕೆಟ್‌ನಲ್ಲೂ ಮಿಂಚಿರುವ ರಾಸ್ ಟೇಲರ್, ನೆದರ್ಲೆಂಡ್ ವಿರುದ್ಧ ತಮ್ಮ 450ನೇ ಅಂತಾರಾಷ್ಟ್ರೀಯ ಪಂದ್ಯವಾಡಿದರು. 2006ರಿಂದ 2022ರವರೆಗೆ ಸುಧೀರ್ಘ 16 ವರ್ಷಗಳ ಕಾಲ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿರುವ ರಾಸ್ ಟೇಲರ್, ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಆಡಿರುವ 450 ಪಂದ್ಯದಲ್ಲಿ 18,199 ರನ್‌ಗಳಿಸಿದ್ದಾರೆ. 42.78ರ ಸರಾಸರಿ ಹೊಂದಿರುವ ಟೇಲರ್, 40 ಶತಕ ಹಾಗೂ 93 ಅರ್ಧಶತಕಗಳಿಸಿದ್ದಾರೆ.
ಏಕದಿನ ಕ್ರಿಕೆಟ್:
2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ರಾಸ್ ಟೇಲರ್, ವೆಸ್ಟ್ ಇಂಡೀಸ್ ವಿರುದ್ಧ ನೇಪಿಯರ್‌ನಲ್ಲಿ ತಮ್ಮ ಮೊದಲ ಪಂದ್ಯವಾಡಿದರು. ಒಟ್ಟು 236 ಏಕದಿನ ಪಂದ್ಯಗಳನ್ನು ಆಡಿರುವ ಟೇಲರ್, 47.73ರ ಬ್ಯಾಟಿಂಗ್ ಸರಾಸರಿಯಲ್ಲಿ 8607 ರನ್‌ಗಳಿಸಿದ್ದಾರೆ. ಇದರಲ್ಲಿ 21 ಶತಕ ಹಾಗೂ 51 ಅರ್ಧಶತಕ ಒಳಗೊಂಡಿದೆ. ಇಂಗ್ಲೆಂಡ್ ವಿರುದ್ಧ ಗಳಿಸಿರುವ 181* ರಾಸ್ ಟೇಲರ್ ಅವರ ಏಕದಿನ ಕ್ರಿಕೆಟ್‌ನ ಗರಿಷ್ಠ ಸ್ಕೋರ್ ಆಗಿದೆ. ನೆದರ್ಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ರಾಸ್ ಟೇಲರ್ ತಮ್ಮ ಕೊನೆಯ ಏಕದಿನ ಪಂದ್ಯವಾಡಿದರು.
ಟೆಸ್ಟ್ ಕ್ರಿಕೆಟ್:
ಏಕದಿನ ಕ್ರಿಕೆಟ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದ ಬಳಿಕ ರಾಸ್ ಟೇಲರ್, ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದರು. 2007ರ ನವೆಂಬರ್ 8ರಂದು ಸೌತ್ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಟೇಲರ್, ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವಾಡಿದರು. ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಒಟ್ಟು 112 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಸ್ ಟೇಲರ್, 196 ಇನ್ನಿಂಗ್ಸ್‌ಗಳಲ್ಲಿ 44.66ರ ಸರಾಸರಿಯಲ್ಲಿ 7683 ರನ್‌ಗಳಿಸಿದ್ದಾರೆ. ಇದರಲ್ಲಿ 19 ಶತಕ ಹಾಗೂ 35 ಅರ್ಧಶತಕ ಒಳಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 290 ರನ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ರಾಸ್ ಟೇಲರ್ ಅವರ ಗರಿಷ್ಠ ಸ್ಕೋರ್ ಆಗಿದೆ.
ಟಿ20 ಕ್ರಿಕೆಟ್:
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಬಳಿಕ ಟಿ20 ಕ್ರಿಕೆಟ್‌ನಲ್ಲೂ ರಾಸ್ ಟೇಲರ್ ತಮ್ಮ ಛಾಪು ಮೂಡಿಸಿದ್ದಾರೆ. 2006ರ ಡಿಸೆಂಬರ್‌ನಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದರು. ಒಟ್ಟು 102 ಟಿ20 ಪಂದ್ಯವನ್ನು ಆಡಿರುವ ಟೇಲರ್, 26.15ರ ಸರಾಸರಿಯಲ್ಲಿ 1909 ರನ್‌ಗಳಿಸಿದ್ದು, ಇದರಲ್ಲಿ 7 ಅರ್ಧಶತಕ ಒಳಗೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 63 ರನ್‌ಗಳು, ರಾಸ್ ಟೇಲರ್ ಅವರ ಗರಿಷ್ಠ ಸ್ಕೋರ್ ಆಗಿದೆ.