IPL 2022- Umran Malik – SRH – ಐಪಿಎಲ್ ನ ರಾಕೆಟ್ ಬೌಲರ್ ಉಮ್ರಾನ್ ಮಲ್ಲಿಕ್

ಜಮ್ಮು ಕಾಶ್ಮೀರದ ವೇಗಿ, ಸನ್ ರೈಸರ್ಸ್ ಹೈದ್ರಬಾದ್ ತಂಡದ ವೇಗ ದೂತ ಉಮ್ರಾನ್ ಮಲ್ಲಿಕ್ ಅವರು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಕೆಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
22ರ ಹರೆಯದ ಉಮ್ರಾನ್ ಮಲ್ಲಿಕ್ ಅವರಿಗೆ ಈ ಬಾರಿಯ ಐಪಿಎಲ್ ನಲ್ಲಿ ವೇಗವಾಗಿ ಚೆಂಡನ್ನು ಎಸೆಯುವುದೇ ಕಾಯಕವಾಗಿದೆ. ವಿಕೆಟ್ ಸಿಗಲಿ, ಸಿಗದೇ ಇರಲಿ, ರನ್ ನೀಡಲಿ, ದುಬಾರಿಯೇ ಆಗಲಿ, ಉಮ್ರಾನ್ ಮಲ್ಲಿಕ್ ಅವರ ವೇಗಕ್ಕೆ ಇತಿಮಿತಿ ಇರಲಿಲ್ಲ. ಎಷ್ಟು ವೇಗವಾಗಿ ಎಸೆಯಲು ಸಾಧ್ಯವೋ ಅಷ್ಟು ವೇಗವಾಗಿ ಬೌಲಿಂಗ್ ಮಾಡಿದ್ದಾರೆ.
ಐಪಿಎಲ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಸರಾಸರಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 157 ಕಿಲೋ ಮೀಟರ್ ವೇಗದಲ್ಲಿ ಎಸೆತವನ್ನು ಹಾಕಿದ್ದಾರೆ.
ತನ್ನ 17ರ ಹರೆಯದ ತನಕ ಟೆನ್ನಿಸ್ ಬಾಲ್ ಆಡುತ್ತಿದ್ದ ಉಮ್ರಾನ್ ಮಲ್ಲಿಕ್ ಕಳೆದ ಐದು ವರ್ಷಗಳಲ್ಲಿ ಲೆದರ್ ಬಾಲ್ ನಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಇರ್ಫಾನ್ ಪಠಾಣ್ ಗರಡಿಯಲ್ಲಿ ಪಳಗಿದ್ದ ಉಮ್ರಾನ್ ಮಲ್ಲಿಕ್ ಸನ್ ರೈಸರ್ಸ್ ಹೈದ್ರಬಾದ್ ತಂಡದ ನೆಟ್ ಬೌಲರ್ ಆಗಿದ್ದರು.
ಆದ್ರೆ 2021ರಲ್ಲಿ ನಟರಾಜನ್ ಗಾಯಗೊಂಡಾಗ ಮೊದಲ ಬಾರಿ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ವೇಗದ ಎಸೆತದ ಮೂಲಕವೇ ಗಮನ ಸೆಳೆದಿದ್ದ ಉಮ್ರಾನ್ ಮಲ್ಲಿಕ್, 2022ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ಟಿ-20 ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.
ಅಂದ ಹಾಗೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಪ್ಲೇ ಆಫ್ ಗೆ ಎಂಟ್ರಿ ಪಡೆದುಕೊಂಡಿಲ್ಲ. ಆದ್ರೂ ಅದ್ಭುತ ಬೌಲರ್ ಅನ್ನು ರೂಪುಗೊಳಿಸಿದ್ದ ಹೆಗ್ಗಳಿಕೆ ಎಸ್ ಆರ್ ಎಚ್ ತಂಡದ್ದಾಗಿದೆ.

ಇನ್ನು ಉಮ್ರಾನ್ ಮಲ್ಲಿಕ್ ಅವರಿಗೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಜೀವನದಲ್ಲೇ ಮರೆಯುವುದಿಲ್ಲ. ಯಾಕಂದ್ರೆ ಅಷ್ಟೊಂದು ಸಾಧನೆಯನ್ನು ಒಂದೇ ಋತುವಿನಲ್ಲಿ ಮಾಡಿದ್ದಾರೆ.
ಹೌದು, ಐಪಿಎಲ್ ಪಂದ್ಯದಲ್ಲಿ ವೇಗದ ಎಸೆತಗಾರನಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿತ್ತು. ಈ ಬಾರಿ ಲೀಗ್ ನ 14 ಪಂದ್ಯಗಳಲ್ಲೂ ಉಮ್ರಾನ್ ಮಲ್ಲಿಕ್ ವೇಗದ ಎಸೆತಗಳನ್ನು ಹಾಕಿ ಒಟ್ಟು 14 ಲಕ್ಷ ರೂಪಾಯಿಗಳನ್ನು ಬಹುಮಾನದ ರೂಪದಲ್ಲಿ ಪಡೆದುಕೊಂಡಿದ್ದಾರೆ. ಅಲ್ಲದೆ 20.18ರ ಸರಾಸರಿಯಲ್ಲಿ ಮಲ್ಲಿಕ್ ಅವರು 18 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಉಮ್ರಾನ್ ಮಲ್ಲಿಕ್ ಅವರು ರಾಜಸ್ತಾನ ವಿರುದ್ಧ 150 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆದ್ರೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 152.4 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದರು. IPL 2022- Umran Malik – SRH – 22-year-old Umran Malik from J&K rocket bowler

ಹಾಗೇ ಗುಜರಾತ್ ಟೈಟಾನ್ಸ್ ವಿರುದ್ಧ 153.3 ಕಿಲೋ ಮೀಟರ್, ಕೆಕೆಆರ್ ವಿರುದ್ಧ 150.1 ಕಿಲೋ ಮೀಟರ್, ಪಂಜಾಬ್ ಕಿಂಗ್ಸ್ ವಿರುದ್ಧ 152.6 ಕಿಲೋ ಮೀಟರ್, ಆರ್ ಸಿಬಿ ವಿರುದ್ಧ 151.1 ಕಿಲೋ ಮೀಟರ್, ಗುಜರಾತ್ ಟೈಟಾನ್ಸ್ ವಿರುದ್ದ 152.9 ಕಿಲೋ ಮೀಟರ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 154 ಕಿಲೋ ಮೀಟರ್, ದೆಹಲಿ ಕ್ಯಾಪಿಟಲ್ಸ್ ವಿರುದ್ಧ 157 ಕಿಲೋ ಮೀಟರ್, ಆರ್ ಸಿಬಿ ವಿರುದ್ಧ 150.2 ಕಿಲೋ ಮೀಟರ್, ಕೆಕೆಆರ್ ವಿರುದ್ಧ 152.2 ಕಿಲೋ ಮೀಟರ್, ಮುಂಬೈ ಇಂಡಿಯನ್ಸ್ ವಿರುದ್ಧ 154.8 ಕಿಲೋ ಮೀಟರ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ 153.5 ಕಿಲೋ ಮೀಟರ್ ವೇಗದಲ್ಲಿ ಎಸೆತಗಳನ್ನು ಹಾಕಿದ್ದರು.
ಒಟ್ಟಿನಲ್ಲಿ ಉಮ್ರಾನ್ ಅವರು ಬೌಲಿಂಗ್ ನಲ್ಲಿ ಲಯ ಕಂಡುಕೊಂಡ್ರೆ ಟೀಮ್ ಇಂಡಿಯಾದ ಅದ್ಭುತ ಬೌಲರ್ ಆಗಿ ಹೊರಹೊಮ್ಮುವುದರಲ್ಲಿ ಅನುಮಾನವೇ ಇಲ್ಲ. ಇದೀಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಉಮ್ರಾನ್ ಮಲ್ಲಿಕ್ ಇನ್ನಷ್ಟು ಪ್ರಜ್ವಲಿಸುವುದರಲ್ಲೂ ಸಂದೇಹವೇ ಇಲ್ಲ.