ಬನುಕ ರಾಜಪಕ್ಸ(31) ಸ್ಪೋಟಕ ಬ್ಯಾಟಿಂಗ್ ನಡುವೆಯೂ ಉಮೇಶ್ ಯಾದವ್(4/23) ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ಎದುರಾಳಿ ತಂಡಕ್ಕೆ 138 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 18.2 ಓವರ್ಗಳಲ್ಲಿ 137 ರನ್ಗಳಿಗೆ ಸರ್ವಪತನ ಕಂಡಿತು. ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಕೊಲ್ಕತಾ ನೈಟ್ ರೈಡರ್ಸ್ ಬೌಲರ್ಗಳು ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡಕ್ಕೆ ಬೌಲರ್ಗಳು ಆಸರೆಯಾದರು. ನಾಯಕ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ದಾಳಿ ನಡೆಸಿದ ಕೊಲ್ಕತ್ತಾ ಬೌಲರ್ಗಳು, ಪಂಜಾಬ್ ಕಿಂಗ್ಸ್ ಆಟಗಾರರಿಗೆ ಕಡಿವಾಣ ಹಾಕಿದರು. ಮಾರಕ ಬೌಲಿಂಗ್ ಪ್ರದರ್ಶಿಸಿದ ವೇಗಿ ಉಮೇಶ್ ಯಾದವ್ 4 ಓವರ್ಗಳಲ್ಲಿ ಕೇವಲ 23 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಪಂಜಾಬ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಸಾಥ್ ನೀಡಿದ ನ್ಯೂಜಿ಼ಲೆಂಡ್ನ ಅನುಭವಿ ಆಟಗಾರ ಟಿಮ್ ಸೌತಿ (2/36), ಶಿವಂ ಮಾವಿ (1/39) ಹಾಗೂ ಸುನೀಲ್ ನರೈನ್ (1/23), ಆಂಡ್ರೆ ರಸೆಲ್(1/0) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಮಯಾಂಕ್ ಅಗರ್ವಾಲ್(1) ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಕಣಕ್ಕಿಳಿದ ಬನುಕ ರಾಜಪಕ್ಸ 31 ರನ್ (9 ಬಾಲ್, 3 ಬೌಂಡರಿ, 3 ಸಿಕ್ಸರ್) ಅಬ್ಬರಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಶಿಖರ್ ಧವನ್(16), ಲಿಯಾಮ್ ಲಿವಿಂಗ್ಸ್ಟೋನ್(19), ರಾಜ್ ಬಾವಾ(11), ಶಾರೂಕ್ ಖಾನ್(0), ಹರ್ಪ್ರೀತ್ ಬ್ರಾರ್(14), ರಾಹುಲ್ ಚಹರ್(0) ಜವಾಬ್ದಾರಿಯ ಆಟವಾಡಲಿಲ್ಲ.
ಆದರೆ ಇನ್ನಿಂಗ್ಸ್ ಕೊನೆಯಲ್ಲಿ ಬಿರುಸಿನ ಆಟವಾಡಿದ ಕಗೀಸೋ ರಬಾಡ 25 ರನ್ (16 ಬಾಲ್, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ಅಲ್ಲದೇ 9ನೇ ವಿಕೆಟ್ಗೆ ರಬಾಡ ಹಾಗೂ ಒಡಿಯನ್ ಸ್ಮಿತ್(9*) 35 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನ ಹೆಚ್ಚಿಸಿದರು.