ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರ್‌ಗಳ ಬಿಗು ಬೌಲಿಂಗ್ ನಡುವೆಯೂ ಸೂರ್ಯಕುಮಾರ್ ಯಾದವ್(52) ಹಾಗೂ ತಿಲಕ್ ವರ್ಮ(38*) ಅದ್ಭುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 161 ರನ್ ಕಲೆಹಾಕಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳಿಗೆ ಕೊಲ್ಕತ್ತಾ ಬೌಲರ್‌ಗಳು ಕಡಿವಾಣ ಹಾಕಿದರು. ಪರಿಣಾಮ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 161 ರನ್‌ಗಳಿಸಿ, ಎದುರಾಳಿ ತಂಡಕ್ಕೆ 162 ರನ್‌ಗಳ ಪೈಪೋಟಿಯ ಟಾರ್ಗೆಟ್ ಕೊಟ್ಟಿದೆ.
ಆಸರೆಯಾದ ಸೂರ್ಯ-ತಿಲಕ್:
ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಮುಂಬೈ 55 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಸೂರ್ಯಕುಮಾರ್ ಯಾದವ್ 52 ರನ್ (36 ಬಾಲ್, 5 ಬೌಂಡರಿ, 2 ಸಿಕ್ಸರ್) ಹಾಗೂ ತಿಲಕ್ ವರ್ಮ 38* ರನ್ (27 ಬಾಲ್, 3 ಬೌಂಡರಿ, 2 ಸಿಕ್ಸರ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ 4ನೇ ವಿಕೆಟ್‌ಗೆ 83 ರನ್‌ಗಳ ಅತ್ಯುತ್ತಮ ಜೊತೆಯಾಟವಾಡಿದ ಈ ತಂಡದ ಮೊತ್ತವನ್ನ 150 ರನ್‌ಗಳ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಬಂದ ಕೈರನ್ ಪೊಲಾರ್ಡ್ ಕೇವಲ 5 ಬಾಲ್‌ನಲ್ಲಿ 3 ಸಿಕ್ಸರ್ ನೆರವಿನಿಂದ 22* ರನ್ ಬಿರುಸಿನ ಆಟವಾಡಿ ಅಬ್ಬರಿಸಿದರು.
ಮುಂಬೈ ಸಾಧಾರಣ ಆರಂಭ:
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸಾಧಾರಣ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮ(3) ಹಾಗೂ ಇಶಾನ್ ಕಿಶನ್(14) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಮೊದಲ ಕ್ರಮಾಂಕದಲ್ಲಿ ಬಂದ ಡೆವಲ್ಡ್ ಬ್ರೆವಿಸ್(29) ತಮ್ಮ ಚೊಚ್ಚಲ ಪಂದ್ಯದಲ್ಲಿ ಉಪಯುಕ್ತ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾದರು. ಕೆಕೆಆರ್ ಪರ ಉಮೇಶ್ ಯಾದವ್(1/25), ವರುಣ್ ಚಕ್ರವರ್ತಿ(1/32) ಹಾಗೂ ಪ್ಯಾಟ್ ಕಮ್ಮಿನ್ಸ್(2/49) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.