ಬೌಂಡರಿ, ಸಿಕ್ಸರ್ಗಳ ಮೂಲಕ ಅಬ್ಬರಿಸಿದ ಪ್ಯಾಟ್ ಕಮ್ಮಿನ್ಸ್(56*) ಸ್ಪೋಟಕ ಆಟ ಹಾಗೂ ವೆಂಕಟೇಶ್ ಅಯ್ಯರ್(50*) ಜವಾಬ್ದಾರಿಯ ಬ್ಯಾಟಿಂಗ್ನಿಂದ ಮುಂಬೈ ಇಂಡಿಯನ್ಸ್ ಬೌಲರ್ಗಳನ್ನ ಧೂಳಿಪಟ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, 20 ಓವರ್ಗಳಲ್ಲಿ 4 ವಿಕೆಟ್ಗೆ 161 ರನ್ಗಳಿಸಿತು. ಈ ಟಾರ್ಗೆಟ್ ಎದುರಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ 16 ಓವರ್ನಲ್ಲಿ 162/5 ಗೆಲುವಿನ ದಡಸೇರಿತು. ಈ ಗೆಲುವಿನ ಮೂಲಕ ತನ್ನ ಮೂರನೇ ಗೆಲುವು ಕಂಡ ಕೊಲ್ಕತ್ತಾ, ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿತು. ಆದರೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲಿನ ಆಘಾತ ಅನುಭವಿಸಿತು.
ಅಬ್ಬರಿಸಿದ ಪ್ಯಾಟ್ ಕಮ್ಮಿನ್ಸ್:
ನಿರ್ಣಾಹಕ ಹಂತದಲ್ಲಿ ಕಣಕ್ಕಿಳಿದ ಪ್ಯಾಟ್ ಕಮ್ಮಿನ್ಸ್, ಪಂದ್ಯದ ದಿಕ್ಕನ್ನೇ ಬದಲಿಸಿದರು. 101 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದ ಕಮ್ಮಿನ್ಸ್, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 5ನೇ ಕ್ರಮಾಂಕದಲ್ಲಿ ಕಮ್ಮಿನ್ಸ್ ಕಣಕ್ಕಿಳಿದಾಗ ಕೊಲ್ಕತ್ತಾ ಗೆಲುವಿಗೆ 41 ಬಾಲ್ಗಳಲ್ಲಿ 61 ರನ್ಗಳ ಅಗತ್ಯವಿತ್ತು. ಆದರೆ ಬೌಂಡರಿ, ಸಿಕ್ಸರ್ಗಳ ಮೂಲಕ ರನ್ಗಳಿಸಿದ ಕಮ್ಮಿನ್ಸ್ 56* ರನ್(15 ಬಾಲ್, 4 ಬೌಂಡರಿ, 6 ಸಿಕ್ಸರ್) ಸಿಡಿಸಿದರು. ಅಲ್ಲದೇ 373.33ರ ಸ್ಟ್ರೈಕ್ರೇಟ್ನಲ್ಲಿ ರನ್ಗಳಿಸಿ, ಐಪಿಎಲ್ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಕೆ.ಎಲ್.ರಾಹುಲ್ ದಾಖಲೆ ಸರಿಗಟ್ಟಿದ್ದರು.
ವೆಂಕಟೇಶ್ ಅಯ್ಯರ್ ಆಸರೆ:
ಮುಂಬೈ ನೀಡಿದ 162 ರನ್ಗಳ ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಬಂದ ರಹಾನೆ(7), ಶ್ರೇಯಸ್ ಅಯ್ಯರ್(10) ಬಹುಬೇಗನೆ ನಿರ್ಗಮಿಸಿದರು. ನಂತರ ಬಂದ ಸ್ಯಾಮ್ ಬಿಲ್ಲಿಂಗ್ಸ್(17), ನಿತೀಶ್ ರಾಣ(8), ಆಂಡ್ರೆ ರಸೆಲ್(11) ಬ್ಯಾಟಿಂಗ್ ವೈಫಲ್ಯ ಕಂಡರು. ಆದರೆ ಜವಾಬ್ದಾರಿಯ ಆಟವಾಡಿದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ 50 ರನ್(41 ಬಾಲ್, 6 ಬೌಂಡರಿ, 1 ಸಿಕ್ಸರ್) ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಮುಂಬೈ ಪರ ಮುರುಗನ್ ಅಶ್ವಿನ್, ಥೈಮಲ್ ಮಿಲ್ಸ್ 2 ವಿಕೆಟ್ ಪಡೆದರೆ, ಸ್ಯಾಮ್ಸ್ 1 ವಿಕೆಟ್ ಪಡೆದರು.
ಆಸರೆಯಾದ ಸೂರ್ಯ-ತಿಲಕ್:
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸಾಧಾರಣ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮ(3), ಇಶಾನ್ ಕಿಶನ್(14), ಡೆವಲ್ಡ್ ಬ್ರೆವಿಸ್(29) ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ 4ನೇ ವಿಕೆಟ್ಗೆ ಸೂರ್ಯಕುಮಾರ್ ಯಾದವ್ 52 ರನ್ (36 ಬಾಲ್, 5 ಬೌಂಡರಿ, 2 ಸಿಕ್ಸರ್) ಹಾಗೂ ತಿಲಕ್ ವರ್ಮ 38* ರನ್ (27 ಬಾಲ್, 3 ಬೌಂಡರಿ, 2 ಸಿಕ್ಸರ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೈರನ್ ಪೊಲಾರ್ಡ್(22*) ಬಿರುಸಿನ ಆಟವಾಡಿದರು. ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ 2, ಉಮೇಶ್ ಯಾದವ್ ಹಾಗೂ ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು.