ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಬಲಾಢ್ಯ ತಂಡ ಎನಿಸಿರುವ ಮುಂಬೈ ಇಂಡಿಯನ್ಸ್, 15ನೇ ಆವೃತ್ತಿಯಲ್ಲಿ ಮೊದಲ ಗೆಲುವಿನ ಹುಡುಕಾಟ ನಡೆಸುತ್ತಿದೆ. ಇದಕ್ಕಾಗಿ ಪ್ರತಿ ಪಂದ್ಯದಲ್ಲಿ ತನ್ನದೇ ರಣತಂತ್ರ ರೂಪಿಸಿಕೊಂಡು ಕಣಕ್ಕಿಳಿಯುತ್ತಿರುವ ಮುಂಬೈ, ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿದೆ.
ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ಐದು ಬಾರಿಯ ಚಾಂಪಿಯನ್ ಮುಂಬೈ, ಗೆಲುವಿನ ಖಾತೆ ತೆರೆಯಲು ಹವಣಿಸುತ್ತಿದೆ. ಇದಕ್ಕಾಗಿ ಕಳೆದ ಮೂರು ಪಂದ್ಯಗಳಲ್ಲೂ ತಂಡದಲ್ಲಿ ಒಂದಿಲ್ಲೊಂದು ಬದಲಾವಣೆಯೊಂದಿಗೆ ಮುಂಬೈ ಕಣಕ್ಕಿಳಿಯುತ್ತಿತ್ತು. ಆದರೆ ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿರುವ ರೋಹಿತ್ ಶರ್ಮ ಪಡೆ, ಕೇವಲ ಇಬ್ಬರು ವಿದೇಶಿ ಆಟಗಾರರ ಬಲದೊಂದಿಗೆ ಆಡುತ್ತಿದೆ. ಅನುಭವಿ ಆಲ್ರೌಂಡರ್ ಕೈರನ್ ಪೊಲಾರ್ಡ್ ಹಾಗೂ ಡೆವಲ್ಡ್ ಬ್ರೆವಿಸ್ ಮಾತ್ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಐಪಿಎಲ್ನಲ್ಲಿ 3ನೇ ಬಾರಿ:
ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಆಡುತ್ತಿರುವುದು 3ನೇ ಬಾರಿಗೆ. ಇದರಲ್ಲಿ 2022ರ ಐಪಿಎಲ್ನಲ್ಲಿ ಎರಡು ಬಾರಿ ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಪ್ರಸಕ್ತ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಇದೀಗ ಆರ್ಸಿಬಿ ವಿರುದ್ಧ ಮುಂಬೈ ಸಹ ಇಬ್ಬರು ವಿದೇಶಿ ಪ್ಲೇಯರ್ಗಳೊಂದಿಗೆ ಆಡುತ್ತಿದೆ. ಈ ಹಿಂದೆ 2011ರ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ವಿದೇಶಿ ಆಟಗಾರರ ಬಲದೊಂದಿಗೆ ಆಡಿತ್ತು.
ವಿದೇಶಿ ಬೌಲರ್ಗಳೇ ಅಸ್ತ್ರ:
ಐಪಿಎಲ್ನಲ್ಲಿ ವಿದೇಶಿ ವೇಗದ ಬೌಲರ್ಗಳು ತಮ್ಮದೇ ಪ್ರಾಬಲ್ಯ ತೋರಿದ್ದಾರೆ. ಚುಟುಕು ಕ್ರಿಕೆಟ್ನಲ್ಲಿ ಕಮಾಲ್ ಮಾಡಿರುವ ಪ್ರಮುಖ ವೇಗದ ಬೌಲರ್ಗಳಲ್ಲಿ ಶಾನ್ ಪೊಲಕ್, ಲಸಿತ್ ಮಲಿಂಗ, ಮಿಚೆಲ್ ಜಾನ್ಸನ್, ಟ್ರೆಂಟ್ ಬೋಲ್ಟ್ ಹಾಗೂ ಮಿಚೆಲ್ ಮೆಕ್ಲಗನ್ ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಅಸ್ತ್ರವಾಗಿದ್ದರು.
ಪ್ರಸಕ್ತ ಸೀಸನ್ನ ಮೊದಲ ಮೂರು ಪಂದ್ಯಗಳಲ್ಲಿ ಥೈಮಲ್ ಮಿಲ್ಸ್ಸ್ ಹಾಗೂ ಡೆನಿಯಲ್ ಸ್ಯಾಮ್ಸ್ ಅವರೊಂದಿಗೆ ಮುಂಬೈ ಕಣಕ್ಕಿಳಿದಿತ್ತು. ಆದರೆ ವಿದೇಶಿ ಬೌಲರ್ಗಳ ಮೇಲಿನ ನಂಬಿಕೆ ಕೈಚಲ್ಲಿದ ರೋಹಿತ್ ಪಡೆ, ಭಾರತೀಯ ಬೌಲರ್ಗಳ ಬಲದೊಂದಿಗೆ ಆಡುತ್ತಿದೆ.