ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚಾಣಾಕ್ಷ ಬೌಲಿಂಗ್ ದಾಳಿ ನಡುವೆಯೂ ಸೂರ್ಯಕುಮಾರ್ ಯಾದವ್(68*) ಏಕಾಂಗಿ ಹೋರಾಟದ ನೆರವಿನಿಂದ ಮುಂಬೈ ಇಂಡಿಯನ್ಸ್ 151 ರನ್ ಕಲೆಹಾಕಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಆರ್ಸಿಬಿ ಬೌಲಿಂಗ್ ದಾಳಿಗೆ ನಲುಗಿತು. ಪರಿಣಾಮ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಮುಂಬೈ 20 ಓವರ್ಗಳಲ್ಲಿ 151/6 ರನ್ಗಳಿಸಿತು. ಮುಂಬೈ ಪರ ಸೂರ್ಯಕುಮಾರ್(68*), ರೋಹಿತ್ ಶರ್ಮ(26) ಹಾಗೂ ಇಶಾನ್ ಕಿಶನ್(26) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು.
ಮುಂಬೈ ಉತ್ತಮ ಆರಂಭ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮ 26 ರನ್ (15 ಬಾಲ್, 4 ಬೌಂಡರಿ, 1 ಸಿಕ್ಸ್) ಹಾಗೂ ಇಶಾನ್ ಕಿಶನ್ 26 ರನ್ (28 ಬಾಲ್, 3 ಬೌಂಡರಿ) ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟದ ಆರಂಭ ನೀಡಿದರು.
ಮುಂಬೈ ನಾಟಕೀಯ ಕುಸಿತ:
ಪವರ್-ಪ್ಲೇ ಲಾಭ ಪಡೆದ ಮುಂಬೈ ಇಂಡಿಯನ್ಸ್ ಪವರ್-ಪ್ಲೇನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 49 ರನ್ಗಳಿಸಿತು. ಆದರೆ ಇನ್ನಿಂಗ್ಸ್ನ 6ನೇ ಓವರ್ನ 2ನೇ ಬಾಲ್ನಲ್ಲಿ ರೋಹಿತ್ ಶರ್ಮ ತಮ್ಮ ವಿಕೆಟ್ ಒಪ್ಪಿಸಿದರು. ಆದರೆ ನಂತರದಲ್ಲಿ ಆರ್ಸಿಬಿ ಬೌಲರ್ಗಳ ಎದುರು ತತ್ತರಿಸಿದ ಮುಂಬೈ ನಾಟಕೀಯ ಕುಸಿತ ಕಂಡಿತು. ಪರಿಣಾಮ ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್(8), ತಿಲಕ್ ವರ್ಮ(0), ಕೈರನ್ ಪೊಲಾರ್ಡ್(0) ಹಾಗೂ ರಮಣದೀಪ್ ಸಿಂಗ್(6) ಇಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿಕೊಂಡರು.
ಸೂರ್ಯ ಏಕಾಂಗಿ ಹೋರಾಟ:
ಆರ್ಸಿಬಿ ಬೌಲರ್ಗಳ ಪ್ರಾಬಲ್ಯದ ನಡುವೆಯೂ ಸೂರ್ಯಕುಮಾರ್ ಯಾದವ್ – ರನ್(35 ಬಾಲ್, 5 ಬೌಂಡರಿ, 5 ಸಿಕ್ಸ್) ಜವಾಬ್ದಾರಿಯ ಆಟವಾಡಿದರು. ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರು ನೆಲಕಚ್ಚಿ ನಿಂತು ಆಡಿದ ಸೂರ್ಯಕುಮಾರ್, ಐಪಿಎಲ್ನ 15ನೇ ಹಾಗೂ ಈ ಸೀಸನ್ನ 2ನೇ ಅರ್ಧಶತಕ ಬಾರಿಸಿದರು. ಅಲ್ಲದೇ 7ನೇ ವಿಕೆಟ್ಗೆ ಜಯದೇವ್ ಉನಾದ್ಕಟ್(13*) ಜೊತೆಗೂಡಿ ಅಜೇಯ 72 ರನ್ಗಳ ಉಪಯುಕ್ತ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು.
ಒಂದು ಹಂತದಲ್ಲಿ ಮುಂಬೈ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ನಿರೀಕ್ಷಿಯಲ್ಲಿದ್ದ ಆರ್ಸಿಬಿ, ಕೊನೆಯ ಓವರ್ಗಳಲ್ಲಿ ಹೆಚ್ಚಿನ ರನ್ ನೀಡಿತು. ಸೂರ್ಯಕುಮಾರ್ ಅವರ ಬಿರುಸಿನ ಆಟಕ್ಕೆ ಶರಣಾದ ಆರ್ಸಿಬಿ ಬೌಲರ್ಗಳು, ಕೊನೆಯ 5 ಓವರ್ಗಳಲ್ಲಿ 49 ರನ್ ನೀಡಿದರು. ಆರ್ಸಿಬಿ ಪರ ವನಿಂದು ಹಸರಂಗ(2/28), ಹರ್ಷಲ್ ಪಟೇಲ್(2/23), ಆಕಾಶ್ ದೀಪ್(1/20) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.