ಕ್ವಿಂಟನ್ ಡಿಕಾಕ್(50) ಸ್ಪೋಟಕ ಅರ್ಧಶತಕ ಹಾಗೂ ಅವೇಶ್ ಖಾನ್(3/19) ಆಕ್ರಮಣಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಅದ್ಭುತ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 75 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್, ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 14.3 ಓವರ್‌ಗಳಲ್ಲಿ 101 ರನ್‌ಗಳಿಗೆ ಸರ್ವಪತನ ಕಂಡಿತು. ಆ ಮೂಲಕ 75 ರನ್‌ಗಳ ಹೀನಾಯ ಸೋಲನುಭವಿಸಿತು.

ಡಿಕಾಕ್-ಹೂಡ ಅಬ್ಬರ:
ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ನಾಯಕ ಕೆ.ಎಲ್. ರಾಹುಲ್(0) ಮೊದಲ ಓವರ್‌ನಲ್ಲೇ ರನೌಟ್ ಬಲೆಗೆ ಬಿದ್ದರು. ನಂತರ ಜೊತೆಯಾದ ಕ್ವಿಂಟನ್ ಡಿಕಾಕ್ 50 ರನ್(29 ಬಾಲ್, 4 ಬೌಂಡರಿ, 3 ಸಿಕ್ಸ್) ಹಾಗೂ ದೀಪಕ್ ಹೂಡ 41 ರನ್(27 ಬಾಲ್, 4 ಬೌಂಡರಿ, 2 ಸಿಕ್ಸ್) ಉತ್ತಮ ಆಟವಾಡಿದರು. ಅಲ್ಲದೇ 2ನೇ ವಿಕೆಟ್‌ಗೆ 71 ರನ್‌ಗಳ ಭರ್ಜರಿ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು. ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಕೃನಾಲ್ ಪಾಂಡ್ಯ(25), ಮಾರ್ಕಸ್ ಸ್ಟಾಯ್ನಿಸ್(28), ಆಯುಷ್ ಬಡೋನಿ(15*) ಹಾಗೂ ಜೇಸನ್ ಹೋಲ್ಡರ್(13) ಉಪಯುಕ್ತ ರನ್‌ಗಳಿಸಿದರು. ಪರಿಣಾಮ ಲಕ್ನೋ 20 ಓವರ್‌ಗಳಲ್ಲಿ 176/7 ರನ್‌ಗಳ ಸ್ಪರ್ಧಾತ್ಮಕ ಮೊತ್ತಕಲೆಹಾಕಿತು. ಕೆಕೆಆರ್ ಪರ ರಸೆಲ್ 2, ಸೌಥಿ, ಮಾವಿ ಹಾಗೂ ನರೈನ್ ತಲಾ 1 ವಿಕೆಟ್ ಪಡೆದರು.

ಕೆಕೆರ್ ಬ್ಯಾಟಿಂಗ್ ವೈಫಲ್ಯ:
ಲಕ್ನೋ ಸೂಪರ್ ಜೈಂಟ್ಸ್ ನೀಡಿದ 177 ರನ್ ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್, ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಬಾಬಾ ಇಂದ್ರಜಿತ್(0), ಆರನ್ ಫಿಂಚ್(14) ತಂಡಕ್ಕೆ ಆಸರೆಯಾಗಲಿಲ್ಲ. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್(6) ಹಾಗೂ ನಿತೀಶ್ ರಾಣ(2) ಬಹುಬೇಗನೆ ನಿರ್ಗಮಿಸಿದರು. ಪರಿಣಾಮ 25 ರನ್‌ಗಳಿಗೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ಕೆಕೆಆರ್ ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ಮಧ್ಯಮ ಕ್ರಮಾಂಕದಲ್ಲಿ ಬಂದ ರಿಂಕು ಸಿಂಗ್(6) ರನ್‌ಗಳಿಸುವ ಆತುರದಲ್ಲಿ ವಿಕೆಟ್ ಕೈಚಲ್ಲಿದರು. ಈ ಹಂತದಲ್ಲಿ ಸ್ಪೋಟಕ ಆಟವಾಡಿದ ಆಂಡ್ರೆ ರಸೆಲ್ 45 ರನ್(19 ಬಾಲ್, 3 ಬೌಂಡರಿ, 5 ಸಿಕ್ಸ್) ಹಾಗೂ ಸುನೀಲ್ ನರೈನ್ 22 ರನ್(12 ಬಾಲ್, 3 ಬೌಂಡರಿ, 1 ಸಿಕ್ಸ್) ತಂಡದ ಮೊತ್ತ ಹೆಚ್ಚಿಸಿದರು, ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಉಳಿದಂತೆ ಕೆಳಕ್ರಮಾಂಕದಲ್ಲಿ ಯಾವುದೇ ಆಟಗಾರರು ತಂಡಕ್ಕೆ ಆಸರೆಯಾಗಲಿಲ್ಲ.

ಅವೇಶ್-ಹೋಲ್ಡರ್ ದಾಳಿ:
ಲಕ್ನೋ ಸೂಪರ್ ಜೈಂಟ್ಸ್ ಪರ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡಿದರು. ಪ್ರಮುಖವಾಗಿ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಅವೇಶ್ ಖಾನ್(3/19) ಕೆಕೆಆರ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ತಂಡದ ಗೆಲುವಿನಲ್ಲಿ ಮಿಂಚಿದ ಅವೇಶ್ ಖಾನ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇವರಿಗೆ ಸಾಥ್ ನೀಡಿದ ಜೇಸನ್ ಹೋಲ್ಡರ್(3/31) ಸಹ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರು. ಉಳಿದಂತೆ ಮೊಸಿನ್ ಖಾನ್, ದುಶ್ಮಂತ ಚಮೀರ ಹಾಗೂ ರವಿ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.
ಅಗ್ರಸ್ಥಾನಕ್ಕೇರಿ ಲಕ್ನೋ:
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಹಾಗೂ 3 ಸೋಲಿನಿಂದ 16 ಪಾಯಿಂಟ್ಸ್ ಪಡೆದಿರುವ ಲಕ್ನೋ, +0.703 ರನ್‌ರೇಟ್‌ನೊಂದಿಗೆ ಅಗ್ರಸ್ಥಾನಕ್ಕೇರಿತು. ಟೂರ್ನಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ 7ನೇ ಸೋಲಿನ ಆಘಾತ ಅನುಭವಿಸಿದ ಕೆಕೆಆರ್, ಕೇವಲ 4 ಗೆಲುನಿಂದ 8 ಅಂಕದೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿದೆ.