ಟಿಮ್ ಡೇವಿಡ್(46) ಸ್ಪೋಟಕ ಬ್ಯಾಟಿಂಗ್ ನಡುವೆಯೂ ಬಲಿಷ್ಠ ಕಮ್ಬ್ಯಾಕ್ ಮಾಡಿದ ಸನ್ರೈಸರ್ಸ್ ಹೈದ್ರಾಬಾದ್, 3 ರನ್ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಪ್ಲೇ-ಆಫ್ ಪ್ರವೇಶಿಸುವ ಕನಸನ್ನು ಜೀವಂತ ಇರಿಸಿಕೊಂಡಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದ್ರಾಬಾದ್ 20 ಓವರ್ಗಳಲ್ಲಿ 193/6 ರನ್ಗಳ ಅದ್ಭುತ ಮೊತ್ತ ಕಲೆಹಾಕಿತು. ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭದ ನಡುವೆಯೂ 20 ಓವರ್ಗಳಲ್ಲಿ 7 ವಿಕೆಟ್ಗೆ 190 ರನ್ಗಳಿಸಿತು. ಆ ಮೂಲಕ 3 ರನ್ಗಳ ಸೋಲನುಭವಿಸಿದ ಮುಂಬೈ, ಈ ಸೀಸನ್ನ 10ನೇ ಸೋಲು ಕಂಡಿತು. ಈ ಗೆಲುವಿನೊಂದಿಗೆ 13 ಪಂದ್ಯಗಳಲ್ಲಿ 7ನೇ ಗೆಲುವು ಸಾಧಿಸಿದ ಹೈದ್ರಾಬಾದ್, 12 ಅಂಕದೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 8ನೇ ಸ್ಥಾನದಲ್ಲಿದೆ.

ತ್ರಿಪಾಠಿ ಅರ್ಧಶತಕದ ಆಸರೆ:
ಟಾಸ್ ಸೋತು ಇನ್ನಿಂಗ್ಸ್ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸನ್ರೈಸರ್ಸ್ ಹೈದ್ರಾಬಾದ್, ಆರಂಭದಲ್ಲೇ ಅಭಿಷೇಕ್ ಶರ್ಮ(9) ವಿಕೆಟ್ ಕಳೆದುಕೊಂಡಿತು. ಆದರೆ ಜವಾಬ್ದಾರಿಯುತ ಆಟವಾಡಿದ ಪ್ರಿಯಾಮ್ ಗಾರ್ಗ್(42) ಉಪಯುಕ್ತ ರನ್ಗಳಿಸಿ ಹೊರ ನಡೆದರು. 1ನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಠಿ 76 ರನ್(44 ಬಾಲ್, 9 ಬೌಂಡರಿ, 3 ಸಿಕ್ಸ್) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದ ತ್ರಿಪಾಠಿ, 2022ರ ಐಪಿಎಲ್ನ 3ನೇ ಹಾಗೂ ಒಟ್ಟಾರೆ ಐಪಿಎಲ್ನ 10ನೇ ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಿಕೋಲಸ್ ಪೂರನ್(38) ಸಹ ಉಪಯುಕ್ತ ಕಾಣಿಕೆ ನೀಡಿದರು. ಅಲ್ಲದೇ 3ನೇ ವಿಕೆಟ್ಗೆ ಇವರಿಬ್ಬರು 76(42) ರನ್ ಕಲೆಹಾಕಿದರು. ಕೊನೆ ಹಂತದಲ್ಲಿ ಮಾರ್ಕ್ರಂ(2), ಕೇನ್ ವಿಲಿಯಂಸನ್ 8* ಹಾಗೂ ವಾಷಿಂಗ್ಟನ್ ಸುಂದರ್(9) ಅಲ್ಪಮೊತ್ತ ಕಲೆಹಾಕಿದರು. ಮುಂಬೈ ಪರ ರಮಣದೀಪ್ ಸಿಂಗ್(3/20) ವಿಕೆಟ್ ಪಡೆದರೆ. ಸ್ಯಾಮ್ಸ್, ಮೆರಿಡಿತ್ ಹಾಗೂ ಬುಮ್ರ ತಲಾ 1 ವಿಕೆಟ್ ಪಡೆದರು.

ಚೇಸಿಂಗ್ನಲ್ಲಿ ಎಡವಿದ ಮುಂಬೈ:
ಸನ್ರೈಸರ್ಸ್ ಹೈದ್ರಾಬಾದ್ ನೀಡಿದ 194 ರನ್ಗಳ ಟಾರ್ಗೆಟ್ ಎದುರಿಸಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ(48) ಹಾಗೂ ಇಶಾನ್ ಕಿಶನ್(43) ಮೊದಲ ವಿಕೆಟ್ಗೆ 95 ರನ್ಗಳ ಉತ್ತಮ ಆರಂಭ ಕಂಡಿತು. ಆದರೆ ನಂತರ ಕಣಕ್ಕಿಳಿದ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು. ಪರಿಣಾಮ ಡೆನಿಯಲ್ ಸ್ಯಾಮ್ಸ್(15), ತಿಲಕ್ ವರ್ಮ(8), ಟ್ರಿಸ್ಟನ್ ಸ್ಟಬ್ಸ್(2) ಹಾಗೂ ಸಂಜಯ್ ಯಾದವ್(0) ನೆಲಕಚ್ಚಿ ನಿಂತು ಆಡುವಲ್ಲಿ ವಿಫಲರಾದರು.

ಟಿಮ್ ಡೇವಿಡ್ ವ್ಯರ್ಥ ಹೋರಾಟ:
ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಧೃತಿಗೆಡದ ಟಿಮ್ ಡೇವಿಡ್ 46 ರನ್(18 ಬಾಲ್, 3 ಬೌಂಡರಿ, 4 ಸಿಕ್ಸ್) ಸ್ಪೋಟಕ ಆಟವಾಡಿದರು. ಇನ್ನಿಂಗ್ಸ್ನ 17ನೇ ಓವರ್ನಲ್ಲಿ ಟಿ.ನಟರಾಜನ್ ಬೌಲಿಂಗ್ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ ಟಿಮ್ ಡೇವಿಡ್, ಮುಂಬೈ ಗೆಲುವಿನ ಆಸೆಯನ್ನ ಜೀವಂತ ಇರಿಸಿದರು. ಆದರೆ ಕೊನೆ ಬಾಲ್ನಲ್ಲಿ ಸಿಂಗಲ್ ಕದಿಯುವ ಯತ್ನದಲ್ಲಿ ರನೌಟ್ ಆಗುವ ಮೂಲಕ ಭಾರೀ ನಿರಾಸೆ ಅನುಭವಿಸಿದರು. ಕೊನೆಯಲ್ಲಿ ರಮಣ್ದೀಪ್ ಸಿಂಗ್ 14*(6) ಬಿರುಸಿನ ಆಟವಾಡಿದರು ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ವಿಫಲರಾದರು. ಪರಿಣಾಮ ಮುಂಬೈ ಇಂಡಿಯನ್ಸ್ ಹೋರಾಟ 190 ರನ್ಗಳಿಗೆ ಅಂತ್ಯಗೊಂಡಿತು.

ಉಮ್ರಾನ್ ಮಿಂಚಿದ ದಾಳಿ:
ಮುಂಬೈ ಉತ್ತಮ ಆರಂಭದ ನಡುವೆಯೂ ಉಮ್ರಾನ್ ಮಲ್ಲಿಕ್(3/23) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್ನ ನಿರ್ಣಾಯಕ ಹಂತದಲ್ಲಿ ರೋಹಿತ್ ಶರ್ಮ, ಡೆನಿಯಲ್ ಸ್ಯಾಮ್ಸ್ ಹಾಗೂ ತಿಲಕ್ ವರ್ಮ ವಿಕೆಟ್ ಕಬಳಿಸಿದ ಉಮ್ರಾನ್ ಮಲ್ಲಿಕ್ ಮುಂಬೈ ಗೆಲುವಿನ ನಿರೀಕ್ಷೆಯನ್ನ ಹುಸಿಗೊಳಿಸಿದರು. ಇವರಿಗೆ ಸಾಥ್ ನೀಡಿದ ಭುವನೇಶ್ವರ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.